ಏಷ್ಯಾಡ್​ ಸಾಧಕಿ ಪೂವಮ್ಮಗೆ ನಿವೇಶನ: ಸಿಎಂ ಎಚ್ಡಿಕೆ

ಮಂಗಳೂರು: ಏಷ್ಯಾಡ್ ಪದಕ ವಿಜೇತೆ ಮಂಗಳೂರಿನ ಎಂ.ಆರ್.ಪೂವಮ್ಮ ಅವರಿಗೆ ರಾಜ್ಯ ಸರ್ಕಾರದ ವತಿಯಿಂದ 40 ಲಕ್ಷ ರೂ. ನೀಡಲಾಗಿದ್ದು, ನಿವೇಶನವನ್ನೂ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ದ.ಕ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪೂವಮ್ಮಗೆ ಚೆಕ್ ಹಸ್ತಾಂತರಿಸಿ ಮಾತನಾಡಿದರು.

ಜಕಾರ್ತಾದಲ್ಲಿ ನಡೆದ ಏಷ್ಯಾಡ್‌ನ 400*4 ಮೀ. ಮಹಿಳಾ ರಿಲೆಯಲ್ಲಿ ಪೂವಮ್ಮ ಚಿನ್ನದ ಪದಕ ಹಾಗೂ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಚಿನ್ನದ ಪದಕ ಸಾಧನೆಗೆ 25 ಲಕ್ಷ ರೂ., ಬೆಳ್ಳಿ ಪದಕ ಸಾಧನೆಗೆ 15 ಲಕ್ಷ ರೂ. ಪ್ರೋತ್ಸಾಹಧನ ಸರ್ಕಾರ ನೀಡಿದೆ. ಪೂವಮ್ಮರ ಸಾಧನೆ ಅಭಿನಂದಿಸಿದ ಮುಖ್ಯಮಂತ್ರಿ, ಬೆಂಗಳೂರಿಗೆ ತೆರಳಿದ ಬಳಿಕ ಅಧಿಕಾರಿಗಳ ಜತೆ ಸಮಾಲೋಚನೆ ನಡೆಸಿ ಪ್ರೋತ್ಸಾಹಧನ ಹೆಚ್ಚಳ ಮಾಡುವುದಾಗಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಎಂ.ಆರ್.ಪೂವಮ್ಮ, ಮುಖ್ಯಮಂತ್ರಿ ಅವರ ಸ್ಪಂದನೆ ಮತ್ತು ಸ್ಫೂರ್ತಿಯುತ ಮಾತಿನಿಂದ ಸಂತಸವಾಗಿದೆ. ಬೇರೆ ರಾಜ್ಯದವರು ಏಷ್ಯಾಡ್ ಪದಕ ವಿಜೇತ ಕ್ರೀಡಾಪಟುಗಳಿಗೆ ನೀಡಿದ ಪ್ರೋತ್ಸಾಹ ಧನಕ್ಕೆ ಹೋಲಿಸಿದರೆ ಕರ್ನಾಟಕ ರಾಜ್ಯ ನೀಡಿದ ಮೊತ್ತ ಕಡಿಮೆ ಎನ್ನುವ ಬೇಸರವಿತ್ತು. ಆದರೆ ಮುಖ್ಯಮಂತ್ರಿಗಳು ಅಧಿಕಾರಿಗಳ ಜತೆ ಚರ್ಚಿಸಿ ಗರಿಷ್ಠ ಮೊತ್ತ ನೀಡುವುದಾಗಿ ಭರವಸೆ ನೀಡಿದ್ದಾರೆ. ಇದು ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಜಯಮಾಲಾ ಶುಭ ಹಾರೈಸಿದರು. ಸಂಸದ ನಳಿನ್ ಕುಮಾರ್ ಕಟೀಲ್. ಎಂಎಲ್ಸಿ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತರಿದ್ದರು.