ರಸ್ತೆ, ಚರಂಡಿ ಕಾಣದ ಗಣೇಶಪುರ

  • ಎಸ್.ಲಿಂಗರಾಜು ಮಂಗಲ ಹನೂರು
    ಸಮೀಪದ ಗಣೇಶಪುರ ಗ್ರಾಮಕ್ಕೆ 20 ವರ್ಷವಾದರೂ ಸಿಸಿ ರಸ್ತೆಯಿಲ್ಲ, ಚರಂಡಿಯಿಲ್ಲ. ಜತೆಗೆ ಗ್ರಾಮದ ಬಹುತೇಕ ಕಡೆಗಳಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದ್ದು, ಅನೈರ್ಮಲ್ಯ ಮನೆಮಾಡಿದೆ.
    ಹನೂರಿನಿಂದ 3 ಕಿ.ಮೀ ಅಂತರದಲ್ಲಿರುವ ಗಣೇಶಪುರ ಮಣಗಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿದೆ. ಇಲ್ಲಿ 20ಕ್ಕೂ ಹೆಚ್ಚು ಕುಟುಂಬಗಳಿದ್ದು, ಸುಮಾರು 100ಕ್ಕೂ ಹೆಚ್ಚಿನ ಜನಸಂಖ್ಯೆ ಇದೆ. ಇಲ್ಲಿನ ಜನರು ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಆದರೆ ಗ್ರಾಮ ಪಂಚಾಯಿತಿ ಆಡಳಿತದ ನಿರ್ಲಕ್ಷ್ಯದಿಂದ ಮೂಲ ಸೌಕರ್ಯದಿಂದ ವಂಚಿತರಾಗಿದ್ದಾರೆ. ಹಾಗಾಗಿ ಕಾಂಕ್ರೀಟ್ ರಸ್ತೆ ಇಲ್ಲ, ಚರಂಡಿ ನಿರ್ಮಿಸಿಲ್ಲ. ಇದರ ಜತೆಗೆ ಆಳೆತ್ತರಕ್ಕೆ ಬೆಳೆದು ನಿಂತಿರುವ ಗಿಡಗಂಟಿಗಳಿಂದ ಗ್ರಾಮ ಹಾಳುಕೊಂಪೆಯಾಗಿ ಮಾರ್ಪಟ್ಟಿದೆ. ಪರಿಣಾಮ ನಿವಾಸಿಗಳು ಸಮರ್ಪಕ ಸೌಕರ್ಯ ಸಿಗದೆ ಹೀನಾಯದ ಸ್ಥಿತಿಯಲ್ಲಿ ಜೀವನ ನಡೆಸುತ್ತಿದ್ದಾರೆ.
  • ಚರಂಡಿ ಕಾಣದ ಬೀದಿಗಳು: ಗ್ರಾಮದಲ್ಲಿ 4 ಬೀದಿಗಳಿವೆ. ಆದರೆ ಇದುವರೆಗೂ ಯಾವುದೇ ಬೀದಿ ಕೂಡ ಚರಂಡಿ ಭಾಗ್ಯ ಕಂಡಿಲ್ಲ. ಹೀಗಾಗಿ ಇಲ್ಲಿನ ಪ್ರತಿಯೊಂದು ಮನೆ ಮುಂದೆ ಕೊಳಚೆ ನೀರು ಹರಿಯುತ್ತಿದ್ದು, ದುರ್ವಾಸನೆ ಬೀರುತ್ತಿದೆ. ಅಲ್ಲದೆ ಕೊಳಚೆ ನೀರಿನೊಂದಿಗೆ ಕಸ ಕಡ್ಡಿಗಳು ತಿಂಗಳಾನುಗಟ್ಟಲೇ ಕೊಳೆತು ಗಬ್ಬು ನಾರುತ್ತಿವೆ. ಇದರಿಂದ ಇಲ್ಲಿನ ವಾಸಿಗಳು ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಪರಿಣಾಮ ಅನೈರ್ಮಲ್ಯ ತಾಣವಾಗಿ ಮಾರ್ಪಟ್ಟಿದೆ. ಕೊಳಚೆ ನೀರು ಯಾವಾಗಲೂ ಮನೆ ಮುಂದೆ ನಿಲ್ಲುತ್ತಿರುವುದರಿಂದ ನಿವಾಸಿಗಳಿಗೆ ನಿತ್ಯ ಸೊಳ್ಳೆಗಳ ಕಾಟ ತಪ್ಪಿದ್ದಲ್ಲ. ಹೀಗಾಗಿ ಇಲ್ಲಿನ ಜನರಿಗೆ ರೋಗ ರುಜಿನ ಹರಡುವ ಭೀತಿ ಕಾಡುತ್ತಿದೆ.
  • ಮಣ್ಣಿನ ರಸ್ತೆಗಳು: ಗ್ರಾಮದಲ್ಲಿ ಸಿಸಿ ರಸ್ತೆ ಇಲ್ಲ. ಈ ರಸ್ತೆ ಕಲ್ಲು ಮಣ್ಣು, ಮುಳ್ಳು, ತಗ್ಗು ದಿಣ್ಣೆಗಳಿಂದ ಕೂಡಿದೆ. ಅಲ್ಲದೆ ದಾರಿಯಲ್ಲಿ ಗಿಡಗಂಟಿಗಳು ಆಳೆತ್ತರಕ್ಕೆ ಬೆಳೆದು ನಿಂತಿದೆ. ಪರಿಣಾಮ ಹಾವು, ಚೇಳು ಕಾಡು ಪ್ರಾಣಿಗಳ ಭಯ ಗ್ರಾಮಸ್ಥರಿಗೆ ಆವರಿಸಿದೆ. ಈ ನಡುವೆ ಕೆಲವು ವಿದ್ಯುತ್ ಕಂಬಗಳಲ್ಲಿ ದೀಪಗಳಿಲ್ಲದಿರುವುದು ಇಲ್ಲಿನ ಜನರಲ್ಲಿ ಮತ್ತಷ್ಟು ಆತಂಕಕ್ಕೀಡುಮಾಡಿದೆ.
    ಸಿಸಿ ರಸ್ತೆ, ಚರಂಡಿ ನಿರ್ಮಿಸುವಂತೆ ಗ್ರಾಪಂ ಆಡಳಿತಕ್ಕೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಇನ್ನಾದರೂ ಇತ್ತ ಗಮನಹರಿಸಿ ಮೂಲ ಸೌಕರ್ಯ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಿಸುವ ಸಂಬಂಧ ಈಗಾಗಲೇ ಕ್ರಿಯಾಯೋಜನೆ ತಯಾರಿಸಲಾಗಿದೆ. ಸಮಾನ್ಯ ಸಭೆಯ ನಂತರ ತೀರ್ಮಾನ ಕೈಗೊಂಡು ಸದ್ಯದಲ್ಲಿಯೇ ಕಾಮಗಾರಿ ಪ್ರಾರಂಭಿಸಲಾಗುವುದು.
ಕವಿತಾ, ಪಿಡಿಒ, ಮಣಗಳ್ಳಿ ಗ್ರಾಮ ಪಂಚಾಯಿತಿ

Leave a Reply

Your email address will not be published. Required fields are marked *