ಕೆಲ ಜಿಲ್ಲೆಗಳಿಗೆ ಮಾತ್ರ ಎಚ್‌ಡಿಕೆ ಸಿಎಂ – ಶಾಸಕ ಕೆ.ಶಿವನಗೌಡ ನಾಯಕ ಟೀಕೆ

ಸಿರವಾರ: ಎಚ್.ಡಿ.ಕುಮಾರಸ್ವಾಮಿ ಕೆಲ ಜಿಲ್ಲೆಗಳಿಗೆ ಮಾತ್ರ ಮುಖ್ಯಮಂತ್ರಿಯಾಗಿದ್ದಾರೆ. ಅಖಂಡ ಕರ್ನಾಟಕದ ಅಭಿವೃದ್ಧಿಗೆ ಮುಂದಾಗುತ್ತಿಲ್ಲ ಎಂದು ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ ಆರೋಪಿಸಿದರು. ಗೂಗಲ್ನಿಂದ ಕರೇಗುಡ್ಡ ಗ್ರಾಮದವರೆ ಕೈಗೊಂಡ ಪಾದಯಾತ್ರೆ ಪಟ್ಟಣಕ್ಕೆ ಆಗಮಿಸಿದಾಗ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನ, ಮಂಡ್ಯ, ರಾಮನಗರ, ಚನ್ನಪಟ್ಟಣ ಸೇರಿ ಅವರ ಮಡದಿ, ಸಹೋದರರ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರೂ. ಅನುದಾನ ನೀಡಿ ಹೈಕ ಭಾಗದಲ್ಲಿ ಗ್ರಾಮ ವಾಸ್ತವ್ಯದ ನಾಟಕವಾಡುತ್ತಿದ್ದಾರೆ. ನಮ್ಮ ಜಿಲ್ಲೆಗೆ, ತಾಲೂಕಿಗೆ ರಾಜ್ಯ ಸರ್ಕಾರದಿಂದ ಅನ್ಯಾಯವಾಗುತ್ತಿದೆ. ಜಿಲ್ಲೆಯ 20 ಲಕ್ಷ ಜನರ ಸಮಸ್ಯೆಗಳ ಹೊತ್ತು 50 ಬೇಡಿಕೆಗಳೊಂದಿಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಸಮಸ್ಯೆಗೆ ಸಿಎಂ ಸ್ಪಂದಿಸಿದರೆ ಸರಿ, ಇಲ್ಲವಾದರೆ ಇನ್ನು ದೊಡ್ಡ ಮಟ್ಟದ ಹೋರಾಟ ರೂಪಿಸಲಾಗುವುದು ಎಂದರು.

ಮೂರು ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿ ಸರಿಯಾಗಿ ಒಂದು ಬೆಳೆಗೂ ನೀರು ಸಿಗುತ್ತಿಲ್ಲ. ಆದರೆ, ಸರ್ಕಾರ ಜಲಾಶಯದಿಂದ ಬೆಂಗಳೂರಿಗೆ 18 ಟಿಎಂಸಿ ಅಡಿ ನೀರು ಕೊಂಡೊಯ್ಯಲು ಮುಂದಾಗುತ್ತಿದೆ ಎಂದು ದೂರಿದರು.

ನವಲಿ ಬಳಿ ಸಮಾನಾಂತರ ಜಲಾಶಯ ನಿರ್ಮಿಸಬೇಕು. ಜತೆಗೆ ಕವಿತಾಳದಲ್ಲಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಸಿಎಂಗೆ ಶಿವನಗೌಡ ನಾಯಕ ಒತ್ತಾಯಿಸಿದರು. ಈ ಸಂದರ್ಭ ಜಿಲ್ಲೆಯ ಮತ್ತು ಪಟ್ಟಣದ ಮುಖಂಡರು, ಸಾರ್ವಜನಿಕರು ಪಾದಯಾತ್ರೆ ಸಾಥ್ ನೀಡಿದರು.

Leave a Reply

Your email address will not be published. Required fields are marked *