ಸಿರಗುಪ್ಪ, ಹೂವಿನಹಡಗಲಿಯಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ಅದ್ದೂರಿ

15 ಸಾವಿರಕ್ಕೂ ಹೆಚ್ಚು ಜನರು ಭಾಗಿ | ವಿವಿಧ ಕಲಾ ತಂಡಗಳು ಭಾಗಿ, ಮಲ್ಲಗಂಬ ಪ್ರದರ್ಶನ

ಸಿರಗುಪ್ಪ: ನಗರದ ನಿಟ್ಟೂರು ನರಸಿಂಹಮೂರ್ತಿ ಬಯಲು ಜಾಗದಲ್ಲಿ ವಿಶ್ವ ಹಿಂದು ಪರಿಷತ್ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ಸಕಲ ವಾದ್ಯಮೇಳ, ವಿವಿಧ ಕಲಾ ತಂಡಗಳೊಂದಿಗೆ ನಗರದಲ್ಲಿ ಗುರುವಾರ ಅದ್ದೂರಿಯಾಗಿ ನಡೆಯಿತು.

ಶಾಸಕ ಎಂ.ಎಸ್.ಸೋಮಲಿಂಗಪ್ಪ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಹುಬ್ಬಳ್ಳಿಯ ಜೈ ಕರ್ನಾಟಕ ಮಲ್ಲಗಂಬ ತಂಡದ ಸದಸ್ಯರು ಮಲ್ಲಗಂಬ ಪ್ರದರ್ಶನ ನಡೆಯಿತು.

ತೆಕ್ಕಲಕೋಟೆಯ ಸಿಂಧೋಳ ಸಮುದಾಯದ ಕಲಾತಂಡದಿಂದ ದುರುಗುಮುರುಗಿ ಪ್ರದರ್ಶನ, ರಾಮಡೋಲು ಕುಣಿತ, ತಾಲೂಕಿನ ವಿವಿಧ ಗ್ರಾಮಗಳ ಡೊಳ್ಳು ತಂಡಗಳಿಂದ ಡೊಳ್ಳು ಕುಣಿತ, ದೇಶಭಕ್ತಿ ಗೀತೆಗಳಿಗೆ ಡಿಜೆ ಮುಂದೆ ಯುವಕರ ತಂಡ ಕುಣಿದು ಕುಪ್ಪಳಿಸಿತು.

ಯುವಕರು, ಮಕ್ಕಳು, ಮಹಿಳೆಯರು ಗಣಪತಿ ಬಪ್ಪ ಮೋರಿಯಾ ಎನ್ನುವ ಜೈಕಾರ ಹಾಕುವ ಮೂಲಕ ಮೆರವಣಿಗೆಗೆ ಮತ್ತಷ್ಟು ಮೆರಗು ನೀಡಿದರು. ಬಹುತೇಕ ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಗಳು, ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ 15 ಸಾವಿರಕ್ಕೂ ಹೆಚ್ಚು ಜನರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ಮೆರವಣಿಗೆ ಸಾಗಿದಾಗ ಸ್ವಲ್ಪ ಹೊತ್ತು ಪ್ರಯಾಣಿಕರಿಗೆ ತೊಂದರೆಯಾಯಿತು. ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.

ಹೂವಿನಹಡಗಲಿಯಲ್ಲಿ ಬೃಹತ್ ಶೋಭಾಯಾತ್ರೆ

ಹೂವಿನಹಡಗಲಿ: ಪಟ್ಟಣದ ತೇರು ಹನುಮಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದು ಪರಿಷತ್ ಹಾಗೂ ಬಜರಂಗದಳದಿಂದ 11 ದಿನ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಗುರುವಾರ ಬೃಹತ್ ಶೋಭಾಯಾತ್ರೆ ಮೂಲಕ ವಿಸರ್ಜನೆ ಮಾಡಲಾಯಿತು.

ಮೆರವಣಿಗೆಗೆ ಹಿರೇಮಲ್ಲನಕೆರೆ ಮಠದ ಶ್ರೀ ಚನ್ನಬಸವ ಸ್ವಾಮೀಜಿ ಚಾಲನೆ ನೀಡಿದರು. ಪಟ್ಟಣದ ಸೇರಿ ಗ್ರಾಮೀಣ ಭಾಗದಿಂದ ನೂರಾರು ಯುವಕರು ಕೇಸರಿ ಧ್ವಜ ಪ್ರದರ್ಶನದೊಂದಿಗೆ ಕುಣಿದು ಕುಪ್ಪಳಿಸಿದರು.

ವಿಶ್ವ ಹಿಂದು ಪರಿಷತ್‌ನ ಜೆ.ಶಿವರಾಜ್, ಗಡಿಗಿ ಶಿವಕುಮಾರ್, ಜೆ.ಬಸವರಾಜ್, ನಾಗರಾಜ, ಬಿಜೆಪಿ ಮುಖಂಡ ಓದೋ ಗಂಗಪ್ಪ, ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಬಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಎಚ್.ಪೂಜಪ್ಪ, ಕೋಡಿಹಳ್ಳಿ ಮುದುಕಪ್ಪ, ಕೋಡಿಹಳ್ಳಿ ಕೊಟ್ರೇಶ್, ಹಕ್ಕಂಡಿ ಮಹಾದೇವ ಇತರರಿದ್ದರು.

Leave a Reply

Your email address will not be published. Required fields are marked *