ಶಿರಸಿ ಅರ್ಬನ್ ಬ್ಯಾಂಕ್​ಗೆ 2.47 ಕೋ.ರೂ. ಲಾಭ

ಶಿರಸಿ: 112 ವರ್ಷಗಳ ದೀರ್ಘ ಇತಿಹಾಸ ಹೊಂದಿರುವ ದಿ ಶಿರಸಿ ಅರ್ಬನ್ ಸಹಕಾರಿ ಬ್ಯಾಂಕ್ 2017-18ನೇ ಆರ್ಥಿಕ ವರ್ಷದಲ್ಲಿ ತನ್ನ ಒಟ್ಟು ವ್ಯವಹಾರವನ್ನು 1001.80 ಕೋಟಿ ರೂ.ಗಳಿಗೆ ಏರಿಸಿಕೊಂಡಿದೆ. 4.03 ಕೋಟಿ ರೂ. ನಿರ್ವಹಣಾ ಲಾಭ, 2.47 ಕೋಟಿ ರೂ. ನಿವ್ವಳ ಲಾಭದೊಂದಿಗೆ ತನ್ನ ಪ್ರಗತಿಯ ನಾಗಾಲೋಟವನ್ನು ಮುಂದುವರಿಸಿದೆ.

ಬ್ಯಾಂಕ್​ನ ಠೇವಣಿ 646 ಕೋಟಿ ರೂ., ದುಡಿಯುವ ಬಂಡವಾಳ 738 ಕೋಟಿ ರೂ.ಗೆ ಏರಿಕೆಯಾಗಿದೆ. ಸದಸ್ಯರ ಸಂಖ್ಯೆ 40,490 ದಾಟಿದ್ದು, ಶೇರು ಬಂಡವಾಳ 15.02 ಕೋಟಿ ರೂ. ತಲುಪಿದೆ. ಕಳೆದ ವರ್ಷ 53.96 ಕೋಟಿ ರೂ. ಆದಾಯ ಬಂದಿದ್ದರೆ ಈ ವರ್ಷ 57.23 ಕೋಟಿ ರೂ.ಗೆ ಹೆಚ್ಚಳವಾಗಿದೆ. 25 ಲಕ್ಷ ರೂ. ಸ್ಟಾ್ಯಂಡರ್ಡ್ ಅಸೆಟ್​ಗಳಿಗೆ ಅನುವು ಮಾಡಿ 1.31 ಕೋಟಿ ರೂ. ಆದಾಯ ತೆರಿಗೆ ಪಾವತಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿಯೂ ಬ್ಯಾಂಕಿನ ನಿಕ್ಕಿ ಅನುತ್ಪಾದಕ ಆಸ್ತಿಗಳ ಪ್ರಮಾಣ ಶೇ.0 ರಷ್ಟಿದೆ.

ಬ್ಯಾಂಕಿನ ಸ್ವಂತ ಬಂಡವಾಳ 75.06 ಕೋಟಿ ರೂ.ಗಳಿಂದ 77.63 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ದುಡಿಯುವ ಬಂಡವಾಳ 670.79 ಕೋಟಿ ರೂ.ಗಳಿಂದ 737.52 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. ಈ ಎಲ್ಲ ಕಾರಣಗಳಿಂದ ರಾಜ್ಯದ 264 ಪಟ್ಟಣ ಸಹಕಾರಿ ಬ್ಯಾಂಕುಗಳಲ್ಲಿ ಶಿರಸಿ ಅರ್ಬನ್ ಬ್ಯಾಂಕ್ ಅಗ್ರ ಹತ್ತರಲ್ಲಿ ಸ್ಥಾನವನ್ನು ಮುಂದುವರಿಸಿಕೊಂಡು ಬಂದಿದೆ.

ಈ ಆರ್ಥಿಕ ವರ್ಷಾಂತ್ಯಕ್ಕೆ 356.04 ಕೋಟಿ ರೂ.ಗಳಷ್ಟು ಸಾಲವನ್ನು ಬ್ಯಾಂಕ್ ವಿತರಿಸಿದ್ದು, ಆದ್ಯತಾ ರಂಗಕ್ಕೆ ಶೇ. 59.16ರ ಪ್ರಮಾಣದಲ್ಲಿ ಒಟ್ಟು 183.68 ಕೋಟಿ ರೂ. ಮತ್ತು ದುರ್ಬಲ ವರ್ಗದವರಿಗೆ ಶೇ. 16.46ರ ಪ್ರಮಾಣದಲ್ಲಿ 51.10 ಕೋಟಿ ರೂ. ಸಾಲವನ್ನು ವಿತರಿಸಿದೆ. ಈ ಆರ್ಥಿಕ ವರ್ಷದಲ್ಲಿ ಇನ್ನೂ 136 ಕೋಟಿ ರೂ.ಗಳಷ್ಟು ಹೆಚ್ಚಿನ ಸಂಪನ್ಮೂಲಗಳನ್ನು ಹೊಂದಿದ್ದು, ಗ್ರಾಹಕರ ಮತ್ತು ಸದಸ್ಯರ ಅಭಿವೃದ್ಧಿಗಾಗಿ, ಸೃಜನಶೀಲ ಚಟುವಟಿಕೆಗಳಿಗೆ ವಿವಿಧ ಸಾಲ ಯೋಜನೆಗಳನ್ನು ಅತ್ಯಂತ ಸ್ಪರ್ಧಾತ್ಮಕ ದರದಲ್ಲಿ ರೂಪಿಸಿ ಪ್ರಚುರ ಪಡಿಸುತ್ತಿದೆ. ಎಲ್ಲ ಶಾಖೆಗಳು ಕೋರ್ ಬ್ಯಾಂಕಿಂಗ್ ಸೊಲ್ಯೂಶನ್ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಆರ್​ಟಿಜಿಎಸ್, ನೆಫ್ಟ್, ಎಟಿಎಂ, ಎಸ್​ಎಂಎಸ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಐಎಂಪಿಎಸ್, ರುಪೇ ಡೆಬಿಟ್​ಕಾರ್ಡ್ ಇನ್ನಿತರ ಮೌಲ್ಯವರ್ಧಿತ ಸೇವೆಗಳನ್ನು ಗ್ರಾಹಕರಿಗೆ ಒದಗಿಸಲಾಗುತ್ತಿದೆ. ಬ್ಯಾಂಕ್​ನ ಎಟಿಎಂ ಅನ್ನು ಗ್ರಾಹಕರ ಅನುಕೂಲಕ್ಕಾಗಿ ಹುಬ್ಬಳ್ಳಿ, ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರೋಡ್ ಹಾಗೂ ಮುಂಡಗೋಡ ಶಾಖೆಗಳಲ್ಲಿಯೂ ಆರಂಭಿಸಲಾಗಿದೆ. ಶಿರಸಿ ಉಪನಗರ ಮತ್ತು ಹೊನ್ನಾವರ ಶಾಖೆಗಳಲ್ಲಿಯೂ ಎಟಿಎಂ ಅಳವಡಿಕೆಗೆ ಅನುಮತಿ ಲಭ್ಯವಾಗಿದೆ. ದಾಂಡೇಲಿ, ಬಬ್ರುವಾಡಾ, ಕುಮಟಾ, ಯಲ್ಲಾಪುರ, ಶಿರಾಲಿ, ಕಾರವಾರ ಶಾಖೆಗಳಲ್ಲಿ ಎಟಿಎಂಗಳನ್ನು ಅಳವಡಿಸಲು ಈಗಾಗಲೇ ಪ್ರಸ್ತಾವನೆಯನ್ನು ಭಾರತೀಯ ರಿಸರ್ವ್ ಬ್ಯಾಂಕಿಗೆ ಕಳುಹಿಸಲಾಗಿದೆ ಎಂದು ಅಧ್ಯಕ್ಷ ಡಾ. ವಿ. ಎಸ್. ಸೋಂದೆ ತಿಳಿಸಿದ್ದಾರೆ.

ಸಭೆ: ಬ್ಯಾಂಕ್​ನ 113ನೇ ಸರ್ವ ಸಾಧಾರಣ ಸಭೆ ಸೆ. 22ರಂದು ರಾಯರಪೇಟೆಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ನಡೆಯಲಿದೆ. ಸಿಇಒ ಆರತಿ ಎಸ್. ಶೆಟ್ಟರ್ ಸಭೆಯ ಮುಂದಾಳತ್ವ ವಹಿಸಲಿದ್ದಾರೆ.