ಶಿರಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಂತಹ ಪರಿಸ್ಥಿತಿ ಬಂದರೂ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದರ ಅರ್ಥ ನ್ಯಾಯಾಲಯದಲ್ಲಿ ಅವರ ವಿರುದ್ಧ ತೀರ್ಪು ಬಂದರೂ ರಾಜೀನಾಮೆ ನೀಡುವುದಿಲ್ಲ ಎಂದಾಗುತ್ತದೆ. ಇದು ಸಂವಿಧಾನಕ್ಕೆ ಅವರು ಬೆಲೆ ಕೊಡುತ್ತಿಲ್ಲ ಎಂಬುದನ್ನು ತೋರಿಸುತ್ತಿದೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದರು.
ನಗರದ ದೈವಜ್ಞ ಕಲ್ಯಾಣ ಮಂಟಪದಲ್ಲಿ ಚಾತುರ್ವಸ್ಯನಿರತ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಸ್ವಾಮೀಜಿಯವರ ಆಶೀರ್ವಾದ ಪಡೆದ ಬಳಿಕ ಶುಕ್ರವಾರ ಮಾಧ್ಯಮದೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರ ಬಗ್ಗೆ ಪ್ರಾಸಿಕ್ಯೂಷನ್ ತನಿಖೆ ನಡೆಸಿದರೆ ಬಾಂಗ್ಲಾದಂತೆ ಇಲ್ಲಿಯೂ ಗಲಭೆ ಆಗಬಹುದು ಎಂದು ಐವಾನ್ ಡಿಸೋಜಾ ಹೇಳಿಕೆ ನೀಡುತ್ತಾರೆ. ಇವರನ್ನು ರಾಷ್ಟ್ರದ್ರೋಹಿ ಎಂದು ಬಂಧಿಸಬೇಕು. ದೇಶದಲ್ಲಿ ಕಾಂಗ್ರೆಸ್ ನಿರ್ನಾಮವಾಗುತ್ತಿದೆ. ಈಗ ಅವರ ಜತೆಗೆ ಇದ್ದವರೆಲ್ಲ ಒಬ್ಬೊಬ್ಬರಾಗಿ ತಾನೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಅವರು ಮಾಡಿದ ಭ್ರಷ್ಟಾಚಾರಗಳಿಗೆ ನಿರಪರಾಧಿಯಾದ ಅವರ ಪತ್ನಿಯ ಮೇಲೂ ಆಪಾದನೆ ಬರುತ್ತಿದೆ ಎಂದರು. ಎಲ್ಲ ಸ್ವಾಮೀಜಿಗಳು ನಮ್ಮ ಸ್ವಾಮೀಜಿ, ಎಲ್ಲ ಹೆಣ್ಣು ಮಕ್ಕಳು ನಮ್ಮ ಮಗಳು ಎಂದು ಎಲ್ಲ ಹಿಂದುಗಳು ತೀರ್ಮಾನ ಮಾಡಿಕೊಳ್ಳಬೇಕು. ಆಗ ಹಿಂದು ದ್ರೋಹಿಗಳು, ರಾಷ್ಟ್ರ ದ್ರೋಹಿಗಳಿಗೆಲ್ಲ ಹಿಂದುಗಳೆಲ್ಲ ಒಂದಾಗಿದ್ದಾರೆ. ನಾವು ಇವರ ತಂಟೆಗೆ ಹೋಗಬಾರದು ಎಂಬ ಬುದ್ಧಿ ಬರುತ್ತದೆ. ಮುಸ್ಲಿಮರ ರಕ್ಷಣೆ ಮಾಡಿದರಷ್ಟೇ ತಮ್ಮ ಸರ್ಕಾರ ನಡೆಯುತ್ತದೆ ಎಂಬ ಭ್ರಮೆ ಕಾಂಗ್ರೆಸ್ಗೆ ಮೂಡಿದೆ. ಮೊದಲು ಸಿದ್ದರಾಮಯ್ಯ ದೇವರನ್ನು ನಂಬುತ್ತಿರಲಿಲ್ಲ. ಈಗ ಹಿಂದುಗಳ ಭಾವನೆಗೆ ನೋವಾಗುತ್ತಿದೆ ಎಂದು ಅರಿತು ಈಗ ದೇವಸ್ಥಾನಗಳನ್ನು ಹುಡುಕಿಕೊಂಡು ಹೋಗಲಾರಂಭಿಸಿದ್ದಾರೆ. ದೇವರ ಶಾಪವನ್ನು ಅನುಭವಿಸಿದ ಮೇಲೆ ಒಮ್ಮೆಲೇ ಅವರಿಗೆ ದೇವರ ಮೇಲೆ ಭಕ್ತಿ ಮೂಡುತ್ತಿದೆ. ತಾವು ಮಾಡಿದ್ದು ತಪ್ಪು ಎನಿಸಿದೆ. ಈ ಬುದ್ಧಿಯನ್ನೇ ಸಿದ್ದರಾಮಯ್ಯ ಮುಂದುವರೆಸಿಕೊಂಡು ಹೋಗುವುದು ಉತ್ತಮ. ಮುಸ್ಲಿಂ, ಕ್ರಿಶ್ಚಿಯನ್ನರಿಗೆ ಎಷ್ಟು ಗೌರವ ನೀಡುತ್ತೀರೋ, ಅಷ್ಟೇ ಗೌರವವನ್ನು ಹಿಂದು ಸಮಾಜಕ್ಕೂ ನೀಡಬೇಕು ಎಂದರು.