ಅನುದಾನಕ್ಕೆ ಕಾಯುತ್ತಿರುವ ಫಲಾನುಭವಿಗಳು

ಶಿರಸಿ: ಬಸವ ಆವಾಸ್ ಯೋಜನೆಯಡಿ ಒಂದೂವರೆ ವರ್ಷದ ಹಿಂದೆ ಮಂಜೂರಾಗಿದ್ದ 1,500 ಮನೆಗಳಲ್ಲಿ ಕೆಲವು ಇನ್ನೂ ಫೌಂಡೇಷನ್ (ಬುನಾದಿ) ಹಂತದಲ್ಲಿಯೇ ನಿಂತಿವೆ. ಮೊದಲ ಕಂತಿನ ಹಣ ಮಾತ್ರ ಬಿಡುಗಡೆಯಾಗಿದೆ. ಅದರಲ್ಲಿ ಬುನಾದಿ ಕೆಲಸ ಮಾತ್ರ ಪೂರ್ಣಗೊಂಡಿದೆ. ಮುಂದಿನ ಕಂತಿನ ಹಣ ಬಿಡುಗಡೆಗೆ ಫಲಾನುಭವಿಗಳು ಕಾದು ಕುಳಿತಿದ್ದಾರೆ.
ವಿಶ್ವೇಶ್ವರ ಹೆಗಡೆ ಕಾಗೇರಿ ವಿಧಾನಸಭಾಧ್ಯಕ್ಷರಾಗಿದ್ದ ವೇಳೆ 2023ರಲ್ಲಿ ಕ್ಷೇತ್ರಕ್ಕೆ 5 ಸಾವಿರ ಮನೆಗಳನ್ನು ಮಂಜೂರು ಮಾಡಿರುವುದಾಗಿ ಘೋಷಿಸಿದ್ದರು. ನಂತರದ ದಿನಗಳಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಫಲಾನುಭವಿಗಳನ್ನು ಗುರುತಿಸಿ ಅವರಿಗೆ ಮನೆ ನಿರ್ಮಾಣಕ್ಕೆ ಆದೇಶ ಪತ್ರವನ್ನು ವಿತರಿಸಿದ್ದರು. ಆದರೆ, ಅಷ್ಟರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾದ ಕಾರಣ ಆದೇಶ ಪತ್ರ ವಿತರಣೆ ಕಾರ್ಯ ಸ್ಥಗಿತಗೊಂಡಿತ್ತು. ಬಳಿಕ ಆರಿಸಿ ಬಂದ ಶಾಸಕ ಭೀಮಣ್ಣ ನಾಯ್ಕ ಸಹ ಕೆಲ ಫಲಾನುಭವಿಗಳಿಗೆ ಆದೇಶಪತ್ರ ವಿತರಿಸಿದ್ದಾರೆ. ತಾಲೂಕಿನಲ್ಲಿ ಈ ಇಬ್ಬರಿಂದಲೂ ಆದೇಶ ಪತ್ರ ಪಡೆದುಕೊಂಡ ಸುಮಾರು 1,500 ಜನರು ಮನೆ ನಿರ್ಮಾಣದ ಕನಸು ಹೊತ್ತು ನಿರ್ಮಾಣ ಕಾರ್ಯ ಶುರು ಮಾಡಿದ್ದಾರೆ. ಇವರಲ್ಲಿ ಕೆಲವರು ತಮ್ಮ ಹಳೇ ಮನೆ ಕೆಡವಿ ಬುನಾದಿ ಹಾಕಿದ್ದಾರೆ.
2024ರ ಜ. 21ರಂದು ಆದೇಶ ಪತ್ರ ಪಡೆದವರಿಗೆಲ್ಲ ಫೌಂಡೇಷನ್ (ಬುನಾದಿ) ಹಂತದ ಹಣ ಬಿಡುಗಡೆ ಆಗಿದೆ. ತಲಾ 30 ಸಾವಿರ ರೂ. ಫಲಾನುಭವಿಗಳ ಖಾತೆಗೆ ಜಮಾ ಆಗಿದೆ. ಮೊದಲ ಕಂತು ಬಿಡುಗಡೆ ಆದ ಹಿನ್ನೆಲೆಯಲ್ಲಿ ಫಲಾನುಭವಿಗಳು ಮನೆ ಕಾಮಗಾರಿ ಮುಂದುವರಿಸಿದ್ದಾರೆ. ಕೆಲವರು ಹಳೇ ಮನೆ ಕೆಡವಿದ್ದರಿಂದ ಮಳೆಗಾಲ ಆರಂಭ ಆಗುವುದರೊಳಗೆ ಹೊಸ ಮನೆ ನಿರ್ಮಿಸಿಕೊಳ್ಳುವ ಅನಿವಾರ್ಯತೆಯಲ್ಲಿದ್ದರು. ಹೀಗಾಗಿ, ಬಹುತೇಕರು ಹೇಗೂ ಹಣ ಬರುತ್ತದೆ ಎಂಬ ಧೈರ್ಯದಿಂದ ಸ್ವ ಸಹಾಯ ಸಂಘಗಳಿಂದ, ಬ್ಯಾಂಕ್, ಸಹಕಾರಿ ಸಂಘಗಳಿಂದ ಸಾಲ ಪಡೆದು ಮನೆ ಕಾಮಗಾರಿ ಮುಂದುವರಿಸಿದ್ದಾರೆ. ಹಲವು ಮನೆಗಳಿಗೆ ಗಿಲಾಯ ಕಾಮಗಾರಿ ಆಗಬೇಕಾಗಿದೆಯಾದರೂ ಮಳೆಗಾಲದಲ್ಲಿ ವಾಸ್ತವ್ಯದ ದೃಷ್ಟಿಯಿಂದ ಮುಖ್ಯ ಕೆಲಸಗಳನ್ನು ಪೂರೈಸಿಕೊಂಡಿದ್ದಾರೆ. ಇನ್ನು ಕೆಲವರು ಕೈನಲ್ಲಿ ಕಾಸಿಲ್ಲದೇ ಫೌಂಡೇಷನ್ ಹಂತದಲ್ಲಿಯೇ ಮನೆ ಕೆಲಸ ನಿಲ್ಲಿಸಿದ್ದು, ಹಣ ಬಿಡುಗಡೆ ಆದ ಬಳಿಕವೇ ಮನೆ ಕೆಲಸ ಮುಂದುವರಿಸಲು ನಿರ್ಧರಿಸಿದ್ದಾರೆ. ಆದರೆ, ಸಾಲ ಮಾಡಿ ಮನೆ ಕೆಲಸ ಪೂರ್ಣಗೊಳಿಸಿಕೊಂಡ ನೂರಾರು ಜನರು ಈಗ ಪೇಚಿಗೆ ಸಿಲುಕಿದ್ದಾರೆ. ಅತ್ತ ಸರ್ಕಾರದಿಂದ ಹಣ ಬಿಡುಗಡೆ ಆಗದೇ, ಇನ್ನೊಂದೆಡೆ ಬ್ಯಾಂಕ್, ಸಹಕಾರಿ ಸಂಘದಲ್ಲಿ ಸಾಲದ ಬಡ್ಡಿ ತುಂಬಲಾಗದೇ ಮನೆ ಹಣ ಯಾವಾಗ ಬಿಡುಗಡೆಯಾಗಬಹುದು ಎಂದು ಕಾದಿದ್ದಾರೆ. ಅಧಿಕಾರಿಗಳನ್ನು ಭೇಟಿಯಾದರೆ ಹಣ ಬಿಡುಗಡೆ ಆಗೇ ಆಗುತ್ತದೆ. ಸ್ವಲ್ಪ ಸಮಯ ಹಿಡಿಯಬಹುದು ಎಂಬ ಉತ್ತರ ಬರುತ್ತಿದೆ.
ಬಸವ ಆವಾಸ್ ಯೋಜನೆಯಡಿ ಈ ಮನೆಗಳನ್ನು ನಿರ್ಮಿಸಲಾಗಿದ್ದು, 3 ಹಂತಗಳಲ್ಲಿ ಒಟ್ಟು 1.20 ಲಕ್ಷ ರೂ., ಪರಿಶಿಷ್ಟ ಜಾತಿ ಪಂಗಡದವರಿಗೆ 1.50 ಲಕ್ಷ ರೂ. ಹಣ ನೀಡಲಾಗುತ್ತದೆ. ಬುನಾದಿ ಹಂತದ ಬಳಿಕ 30 ಸಾವಿರ ರೂ. ಮೊದಲ ಕಂತು, ಲಿಂಟಾಲ್ ಹಂತಕ್ಕೇರಿದಾಗ ಎರಡನೇ ಕಂತು ಮತ್ತು ರೀಪು, ಪಕಾಸು ಹಾಕಿ ಹಂಚು ಹಚ್ಚಿದ ಬಳಿಕ ಮೂರನೇ ಕಂತಿನ ಹಣ ಬಿಡುಗಡೆಯಾಗಬೇಕು. ಇದರ ಹೊರತಾಗಿ ಉದ್ಯೋಗ ಖಾತ್ರಿ ಬಳಸಿಕೊಂಡು ಅದರಲ್ಲಿ 30 ಸಾವಿರ ರೂ. ಕೆಲಸ ಮಾಡಿಕೊಳ್ಳಬಹುದಾಗಿದೆ. ಆದರೆ, ಇದುವರೆಗೆ ಬುನಾದಿವರೆಗಿನ ಹಣ ಮತ್ತು ಉದ್ಯೋಗ ಖಾತ್ರಿ ಹಣದ ಹೊರತಾಗಿ ಫಲಾನುಭವಿಗಳಿಗೆ ಬೇರೆ ಅನುದಾನ ಲಭಿಸಿಲ್ಲ. ಶಾಸಕ ಭೀಮಣ್ಣ ನಾಯ್ಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಮಾತನಾಡಿ ಮನೆಯ ಉಳಿದ ಹಣ ಬಿಡುಗಡೆಗೆ ಯತ್ನಿಸಬೇಕು ಎಂದು ಕುಳವೆ ಗ್ರಾಪಂ ಉಪಾಧ್ಯಕ್ಷ ಶ್ರೀನಾಥ ಶೆಟ್ಟಿ ಇತರರು ಆಗ್ರಹಿಸಿದ್ದಾರೆ.

ರಾಜೀವಗಾಂಧಿ ವಸತಿ ನಿಗಮದಿಂದ ಬಸವ ಆವಾಸ್ ಯೋಜನೆಗೆ ಹಣ ಬಿಡುಗಡೆ ಆಗುತ್ತದೆ. ಶೀಘ್ರ ಹಣ ಬಿಡುಗಡೆಯಾಗುವ ನಿರೀಕ್ಷೆ ಇದೆ. ಫಲಾನುಭವಿಗಳು ಆತಂಕಪಡುವ ಅಗತ್ಯವಿಲ್ಲ.
ಸತೀಶ ಹೆಗಡೆ ತಾಪಂ ಇಒ ಶಿರಸಿ

ನೆಗ್ಗು ಪಂಚಾಯಿತಿಯಲ್ಲೇ ನೂರಕ್ಕೂ ಅಧಿಕ ಮನೆಗಳಿಗೆ ಪೂರ್ತಿ ಹಣ ಬಂದಿಲ್ಲ. ಕೆಲವರಿಗೆ ಪ್ರಾಯೋಗಿಕವಾಗಿ ಹಾಕುವ 1 ರೂ. ಮಾತ್ರ ಇದುವರೆಗೆ ಸಂದಾಯವಾದ ಹಣವಾಗಿದೆ.
ಚಂದ್ರಕಾಂತ ಹೆಗಡೆ ನೇರ್ಲದ್ದ
ಗ್ರಾಪಂ ಸದಸ್ಯ ನೆಗ್ಗು

Share This Article

ಎಚ್ಚರ, ದೇಹ ದಣಿದಿದ್ರೂ ನಿದ್ದೆ ಬರ್ತಿಲ್ಲವೇ? ಸಿರ್ಕಾಡಿಯನ್ ಸಿಂಡ್ರೋಮ್​ ಇರಬಹುದು!!

ಬೆಂಗಳೂರು: ದೇಹ ದಣಿದಿರುತ್ತದೆ. ಆದರೆ ನಿದ್ರೆ ಬರುತ್ತಿಲ್ಲ. ಇದಕ್ಕೆ ದೇಹದ ಸಿರ್ಕಾಡಿಯನ್ ಲಯ ತಪ್ಪಿರುವುದು, ಅತಿಯಾದ…

ನೆಲದ ಮೇಲೆ ಕುಳಿತು ಊಟ ಮಾಡುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆಯಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಇಂದು ಬಹುತೇಕರು ಡೈನಿಂಗ್ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಿದ್ದಾರೆ. ಆದರೆ, ಮೊದ ಮೊದಲು ಹೆಚ್ಚಿನ…

ನೀವು ಎಷ್ಟು ಆರೋಗ್ಯವಂತರೆಂದು ತಿಳಿಯಲು ನಿಮ್ಮ ನಾಲಿಗೆ ಬಣ್ಣ ಚೆಕ್​ ಮಾಡಿ! ಈ ಬಣ್ಣದಲ್ಲಿದ್ರೆ ತುಂಬಾ ಡೇಂಜರ್​!

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಬಯಸುತ್ತಾರೆ. ಏಕೆಂದರೆ, ಆರೋಗ್ಯವೇ ಭಾಗ್ಯ. ಎಲ್ಲ ಇದ್ದು ಆರೋಗ್ಯವೇ ಇಲ್ಲದಿದ್ದರೆ ಏನು ಪ್ರಯೋಜನಾ?…