ಜನರಿಲ್ಲದೆ ಜನಸ್ಪಂದನಾ ಕಾರ್ಯಕ್ರಮ ಮುಂದೂಡಿಕೆ

ಪ್ರಚಾರದ ಕೊರತೆ ಅಧಿಕಾರಿಗಳ ವಿರುದ್ಧ ಶಾಸಕ ಗರಂ

ಸಿರಗುಪ್ಪ: ನಗರದ ತಾಪಂ ಆವರಣದಲ್ಲಿ ತಾಲೂಕು ಆಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಜನಸ್ಪಂದನಾ ಕಾರ್ಯಕ್ರಮಕ್ಕೆ ಜನರು ಬಾರದ ಕಾರಣ ಜೂ.14ಕ್ಕೆ ಮುಂದೂಡಲಾಯಿತು.

ಸಭೆಗೆ ಬೆರಳೆಣಿಕೆಯಷ್ಟು ಜನರು ಆಗಮಿಸಿದ್ದರು. ಇದರಿಂದ ಬೇಸರಗೊಂಡ ಶಾಸಕ ಎಂ.ಎಸ್.ಸೋಮಲಿಂಗಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜನಸ್ಪಂದನಾ ಸಭೆ ಕುರಿತು ಭಿತ್ತಿ ಪತ್ರ, ಮೈಕ್ ಪ್ರಚಾರ, ಡಂಗೂರ ಸಾರಿಲ್ಲ. ಹೀಗಾದರೆ, ಸಭೆಯಿಂದ ಏನು ಪ್ರಯೋಜನ. ನಗರದಲ್ಲಿ 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಆದರೂ, ಜನರು ಬಂದಿಲ್ಲ. ಎಲ್ಲಿಯೂ ಮೂಲ ಸೌಲಭ್ಯಗಳ ಕೊರತೆ ಇಲ್ಲವೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಕಾಟಚಾರಕ್ಕೆ ಸಭೆ ಏರ್ಪಡಿಸಿದರೆ, ಸಹಿಸುವುದಿಲ್ಲ. ಜನರ ಸಂಕಷ್ಟಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಲು ಸರ್ಕಾರ ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಾರ್ವಜನಿಕರ ಸಮಸ್ಯೆ ಬಗೆಹರಿಸದಿದ್ದಲ್ಲಿ ಮೇಲಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಗ್ರೇಡ್-2 ತಹಸೀಲ್ದಾರ್ ಬಿ.ಮಲ್ಲೇಶಪ್ಪ, ಜಿಪಂ ಸದಸ್ಯ ಎಂ.ಕೋಟೇಶ್ವರರೆಡ್ಡಿ, ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ನಾನು ನಾನು ಬಿಜೆಪಿಯ ನಿಷ್ಟಾವಂತ ಕಾರ್ಯಕರ್ತ. ಪಕ್ಷ ಬಿಡುವ ಪ್ರಶ್ನೆಯೇಯಿಲ್ಲ. ಕಾಂಗ್ರೆಸ್ ಸೇರುತ್ತೇನೆ ಎಂಬ ಮಾಧ್ಯಮಗಳ ವರದಿ ಸುಳ್ಳು. ಕಾಂಗ್ರೆಸ್‌ನವರು ನನ್ನ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಅನೇಕ ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕಾದ ಸಮ್ಮಿಶ್ರ ಸರ್ಕಾರದ ಪ್ರಮುಖರು ಬಿಜೆಪಿ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಸುಳ್ಳು ಸುದ್ದಿ ಹರಿಬಿಡುತ್ತಿದ್ದಾರೆ.
| ಎಂ.ಎಸ್.ಸೋಮಲಿಂಗಪ್ಪ ಶಾಸಕ, ಸಿರಗುಪ್ಪ ಕ್ಷೇತ್ರ

Leave a Reply

Your email address will not be published. Required fields are marked *