ಅವೈಜ್ಞಾನಿಕ ಅಂಡರ್ ಪಾಸ್ ನಿರ್ಮಾಣ

ಸಿರಿಗೆರೆ: ರಾಷ್ಟ್ರೀಯ ಹೆದ್ದಾರಿ 4 ಗೌರಮ್ಮನಹಳ್ಳಿ ಬಳಿ ಅವೈಜ್ಞಾನಿಕವಾಗಿ ಅಂಡರ್‌ಪಾಸ್ ನಿರ್ಮಾಣ ಮಾಡುತ್ತಿದ್ದು ಸರಿಪಡಿಸಲು ಆಗ್ರಹಿಸಿ ಚಿಕ್ಕಾಲಘಟ್ಟ, ಗೌರಮ್ಮನಹಳ್ಳಿ ಸೇರಿ ಸುತ್ತಮುತ್ತ ಗ್ರಾಮಸ್ಥರು ಇತ್ತೀಚೆಗೆ ಪ್ರತಿಭಟನೆ ನಡೆಸಿದರು.

ಎನ್‌ಎಚ್-4 ಹೆದ್ದಾರಿ ಕಾಮಗಾರಿ ಕಾರ್ಯ ಅವೈಜ್ಞಾನಿಕ, ವಿಳಂಬದ ಕಾರಣಕ್ಕೆ ಅನೇಕ ಜನರು ಪ್ರಾಣ ಕಳೆದುಕೊಳ್ಳುವಂತಾಗಿದೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಂಡರ್‌ಪಾಸ್ ರಸ್ತೆ ಎತ್ತರಿಸಿ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಕಾಮಗಾರಿ ಹಿನ್ನೆಲೆಯಲ್ಲಿ ಮಾಡಲಾದ ಗುಂಡಿಗಳನ್ನು ತಕ್ಷಣಕ್ಕೆ ಮುಚ್ಚಬೇಕು. ಸೇವಾ ರಸ್ತೆ ಸರಿಪಡಿಸಬೇಕು. ಮಳೆ ನೀರು ಸರಾಗ ಹರಿದುಹೋಗಲು ಚರಂಡಿ ನಿರ್ಮಿಸದಿದ್ದರೆ ಕಾಮಗಾರಿಗೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್ ಮಂಜುನಾಥ್, ಕಾಮಗಾರಿಗೆ ಅಡ್ಡಿಪಡಿಸಬೇಡಿ. ಬೇಡಿಕೆಗಳನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಎನ್‌ಎಚ್ 4 ಕಾಮಗಾರಿ ಇಂಜಿನಿಯರ್ ಮಲ್ಲಿಕಾರ್ಜುನ್ ಮಾತನಾಡಿ, ಅಂಡರ್‌ಪಾಸ್ ರಸ್ತೆ ಎತ್ತರಿಸುವ ಕಾರ್ಯ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಕುರಿತು ಮೇಲಧಿಕಾರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ತಿಳಿಸಿದರು.

ರೈತಸಂಘದ ಜಿಲ್ಲಾ ಕೋಶಾಧ್ಯಕ್ಷ ಸಿ.ಆರ್.ತಿಮ್ಮಣ್ಣ, ತಾಲೂಕಾಧ್ಯಕ್ಷ ಸುರೇಶ್ ಬಾಬು, ರಾಜ್ಯ ಪ್ರಧಾನ ಕಾರ್ಯದರ್ಶಿ ನುಲೇನೂರು ಶಂಕ್ರಪ್ಪ ಹಾಗೂ ಚಿಕ್ಕಾಲಘಟ್ಟ, ಗೌರಮ್ಮನಹಳ್ಳಿ ಗ್ರಾಮಸ್ಥರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *