ಹಾರುವ ಹಕ್ಕಿ, ಹರಿವ ನದಿಗೆಲ್ಲಿದೆ ಗಡಿಯ ಹಂಗು

ಸಿರಿಗೆರೆ: ವಿಶ್ವ ಕುಟುಂಬಿಗಳಾಗಿ ಬದುಕು ರೂಪಿಸಿಕೊಳ್ಳುವ ಅಗತ್ಯವಿದೆ ಎಂದು ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.

ವಿಶ್ವಸಂಸ್ಥೆಯ ಸಹವರ್ತಿ ಸಂಸ್ಥೆಯಾದ ಅಂತಾರಾಷ್ಟ್ರೀಯ ಶಾಂತಿ ಪ್ರತಿಷ್ಠಾನದಿಂದ ಕೊರಿಯಾ ರಾಜಧಾನಿ ಸಿಯೋಲ್‌ನಲ್ಲಿ ನಡೆಯುತ್ತಿರುವ ಶಾಂತಿ ಸುಭದ್ರತೆ ಮತ್ತು ಮಾನವ ಅಭಿವೃದ್ಧಿ ವಿಷಯಾಧಾರಿತ ವಿಶ್ವ ಶೃಂಗ ಶಾಂತಿ ಸಮ್ಮೇಳನದಲ್ಲಿ ಮಾತನಾಡಿದರು.

ಹಾರುವ ಹಕ್ಕಿಗಳು, ಹರಿವ ನದಿಗಳಿಗೆ ಗಡಿಯ ಹಂಗಿರುವುದಿಲ್ಲ. ಅವುಗಳಿಗೆ ಪಾಸ್‌ಪೋರ್ಟ್, ವೀಸಾ ಬೇಕಿಲ್ಲ. ಅವುಗಳ ನಿಯಂತ್ರಣವೂ ಯಾವ ದೇಶದ ಗಂಡಿಯಿಂದ ಸಾಧ್ಯವಿಲ್ಲ. ಮನುಷ್ಯನೂ ದೇಶ, ಭಾಷೆ ಗಡಿ ಮೀರಿ ಕೆಲಸ ಮಾಡಬೇಕು. ಅಂದಾಗಲೇ ಜೀವನ ಸಾರ್ಥಕವಾಗುತ್ತದೆ ಎಂದರು.

ಕ್ರಿಶ್ಚಿಯನ್, ಹಿಂದು, ಮುಸ್ಲಿಂ, ಬೌದ್ಧರು ಜಗತ್ತಿನಲ್ಲಿ ಬಹು ಸಂಖ್ಯೆಯಲ್ಲಿದ್ದರೂ ಮಾನವರನ್ನು ಪ್ರೀತಿಸುವ ಸರಳ ಮಾನವರು ಅತ್ಯಲ್ಪವಾಗಿದ್ದಾರೆ. ಇಹ-ಪರಗಳೆರಡರಲ್ಲೂ ಸುಖ-ಶಾಂತಿ ದೊರೆಯಬೇಕೆಂಬುದು ಎಲ್ಲ ಧರ್ಮಗಳ ಧ್ಯೇಯವಾಗಿದೆ. ಜಗತ್ತಿನ ಯಾವ ಧರ್ಮವೂ ಹಿಂಸೆ ಬೋಧಿಸಿಲ್ಲವಾದರೂ ಈ ಕಾರಣಕ್ಕೆ ಹಿಂಸಾಚಾರ, ರಕ್ತಪಾತ ನಡೆಯದ ದೇಶವೇ ಇಲ್ಲವೆಂಬುದು ದುರಂತ ಎಂದು ಅಭಿಪ್ರಾಯಪಟ್ಟರು.

ಪ್ರತಿದೇಶಕ್ಕೂ ರಾಜಕೀಯ ಪ್ರೇರಿತ ಭೌಗೋಳಿಕ ಗಡಿಗಳಿರುತ್ತವೆ. ಆದರೆ ಧರ್ಮಗಳ ಆಧಾರದ ಮೇಲೆ ಮನುಷ್ಯರು ತಮ್ಮದೇ ಆದ ಮಾನಸಿಕ ಗಡಿ ನಿರ್ಮಿಸಿಕೊಂಡಿದ್ದಾರೆ. ಅವು ಅವರನ್ನು ವಿಂಗಡಿಸಿ ಇಟ್ಟಿವೆ. ದೇಶಗಳನ್ನು ಬೇರ್ಪಡಿಸುವ ಭೌಗೋಳಿಕ ಗಡಿಗಳು ಕಾಲ ಕಾಲಕ್ಕೆ ಬದಲಾದರೂ ಮಾನಸಿಕವಾಗಿ ನಿರ್ಮಾಣಗೊಂಡ ಅಗೋಚರ ಧಾರ್ಮಿಕ ಗಡಿಗಳು ಎಂದೂ ಬದಲಾಗಲಾರವು ಎಂದರು.

ಧರ್ಮಾಂಧತೆಯಿಂದ ಹಿಂಸೆ ಜಗತ್ತಿನಲ್ಲಿ ಮೇರೆ ಮೀರಿದೆ. 12ನೇ ಶತಮಾನದ ಸಾಮಾಜಿಕ, ಧಾರ್ಮಿಕ ಕ್ರಾಂತಿಯ ಹರಿಕಾರರಾದ ಬಸವಣ್ಣ, ದಯೆಯೇ ಧರ್ಮದ ಮೂಲವೆಂದು ಸಾರಿದರು. ದಯಾಮೂಲವಾದ ಧರ್ಮ ನಮ್ಮದಾಗಬೇಕು. ಜಗತ್ತಿನಲ್ಲಿ ಶಾಂತಿ ನೆಲೆಸಲು ಎಲ್ಲರ ಮನಸ್ಸಿನಲ್ಲೂ ಶಾಂತಿ ನೆಲೆಸಬೇಕು ಎಂದು ತಿಳಿಸಿದರು.