ಪಟ್ಟ, ಚರಪಟ್ಟ, ವಿರಕ್ತ ಸ್ವಾಮೀಜಿ ಪರಂಪರೆ ನಮ್ಮದು

ಸಿರಿಗೆರೆ: ಪಟ್ಟ, ಚರಪಟ್ಟ, ವಿರಕ್ತ ಸ್ವಾಮಿಗಳ ಪರಂಪರೆಯಲ್ಲಿ ಸಿರಿಗೆರೆ ಮಠ ನಡೆದುಕೊಂಡು ಬಂದಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಗ್ರಾಮದ ಐಕ್ಯಮಂಟಪದಲ್ಲಿ ಅಣ್ಣನ ಬಳಗ ಏರ್ಪಡಿಸಿದ್ದ ಚರಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ 11ನೇ ಶ್ರದ್ಧಾಂಜಲಿ ಹಾಗೂ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ತರಳಬಾಳು ಮಠದ ಗುರುಪರಂಪರೆಯಲ್ಲಿ ಚರಪಟ್ಟಾಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಕರ್ಮಯೋಗಿಗಳಾಗಿದ್ದರು. ಸ್ವಾಮಿಗಳು ಜನಕ್ಕೆ ಮಾದರಿಯಾಗಿ ಕೃಷಿಯನ್ನು ಹೇಗೆ ಮಾಡಬಹುದು ಎಂಬುದನ್ನು ಶ್ರೀಗಳು ತೋರಿಸಿಕೊಟ್ಟಿದ್ದರು. ಹಗಲಿರುಳೆನ್ನದೆ ಬೃಹನ್ಮಠದ ಏಳಿಗೆಗಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದರು ಎಂದರು.
ಬದುಕು ಸುಂದರವಾಗಿರಲು ದುಶ್ಚಟದಿಂದ ದೂರವಿರಬೇಕು. ಸದಾ ಕಾಯಕಶೀಲರಾಗಿರಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ನಂಬಿಕೆಯೊಂದಿಗೆ ಸಂಸಾರದ ನೌಕೆ ನಡೆಸಬೇಕು ನವ ದಂಪತಿಗಳಿಗೆ ಕಿವಿ ಮಾತು ಹೇಳಿದರು.
ಟ್ರಾೃಕ್ಟರ್‌ನಲ್ಲಿ ಚರಪಟ್ಟಾಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳ ಭಾವಚಿತ್ರವಿರಿಸಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಸಾಮೂಹಿಕ ವಿವಾಹದಲ್ಲಿ 9 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಅಣ್ಣನ ಬಳಗದ ಅಧ್ಯಕ್ಷ ಐ.ಜಿ. ಚಂದ್ರಶೇಖರಯ್ಯ ಇಷ್ಟಲಿಂಗ ದೀಕ್ಷೆ ಕುರಿತು ಉಪನ್ಯಾಸ ನೀಡಿದರು. ಶಿಕ್ಷಕ ಬಿ.ಎಸ್. ಮರುಳಸಿದ್ದಯ್ಯ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಎಲ್.ಜಿ. ಮೋಹನ್‌ಕುಮಾರ್, ಆಕಾಶ್, ಹೇಮಂತ್ ಪೂಜಾ ಭಾಗವಹಿಸಿದ್ದರು. ಕೆ.ಬಿ. ಶಿವಲಿಂಗಯ್ಯ, ಕೆ. ಸುರೇಶ್ ದಾಸೋಹ ವ್ಯವಸ್ಥೆ ನಿರ್ವಹಿಸಿದರು.