ಅರ್ಜಿ ಹಾಕಲು ಆಸಕ್ತಿ, ಗ್ರಾಮಸಭೆಗೆ ನಿರಾಸಕ್ತಿ

ಸಿರಿಗೆರೆ: ತಲೆ ಮೇಲೊಂದು ಸೂರಿರಲಿ ಎಂದು ಆನ್‌ಲೈನಲ್ಲಿ ಅರ್ಜಿ ಹಾಕಿದವರು ನೂರಾರು ಜನರು. ಆದರೆ ಗ್ರಾಮ ಸಭೆಗೆ ಬಂದವರು ಮಾತ್ರ ಬೆರಳೆಣಿಕೆ ಮಂದಿ!

ಇದು ಸಿರಿಗೆರೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ನಡೆದ ಗ್ರಾಮಸಭೆ ಚಿತ್ರಣ.

ವಸತಿ ರಹಿತರಿಗೆ ಮನೆ ವಿತರಿಸುವ ಕುರಿತು ವ್ಯಾಪಕ ಪ್ರಚಾರ ಮಾಡಿದ್ದ ಹಿನ್ನೆಲೆಯಲ್ಲಿ ಗ್ರಾಮಸಭೆಗೆ ಅರ್ಜಿದಾರರ ದಂಡೇ ನೆರೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು ಆದರದು ಹುಸಿಯಾಗಿದೆ.

ಈ ಮೂಲಕ ಪ್ರಧಾನ ಮಂತ್ರಿ ಆವಾಸ್ ಹಾಗೂ ಬಸವ ವಸತಿ ಯೋಜನೆಯಡಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ಮನೆಗಳ ನಿರ್ಮಾಣಕ್ಕೆ ಸಿರಿಗೆರೆ ಗ್ರಾಪಂ ವ್ಯಾಪ್ತಿಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.

ಗ್ರಾಮಕ್ಕೆ ಒಟ್ಟು 13 ಮನೆಗಳು ಮಂಜೂರಾಗಿದ್ದವು. ಸಭೆಯಲ್ಲಿ ಹಾಜರಿದ್ದವರಲ್ಲೆ ಆಯ್ಕೆ ಪ್ರಕ್ರಿಯೆ ನಡೆದು, ಎಸ್ಟಿ 1, ಅಲ್ಪಸಂಖ್ಯಾತರಿಗೆ 2 ಹಾಗೂ ಸಾಮಾನ್ಯ ವರ್ಗಕ್ಕೆ 10 ಮನೆಗಳನ್ನು ವಿತರಿಸಲಾಯಿತು.

ಪಿಡಿಒ ಎ.ಜಿ.ದೀಪಾ ಮಾತನಾಡಿ, ಸರ್ಕಾರಿ ನಿಯಮಾವಳಿಯಂತೆ ಅರ್ಹರಿಗೆ ಮನೆ ವಿತರಿಸಲಾಗಿದೆ. ಇವು ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿದ್ದು, ಮಾರಾಟ ಮಾಡುವಂತಿಲ್ಲ ಎಂದು ತಿಳಿಸಿದರು.

ಗ್ರಾಪಂ ವ್ಯಾಪ್ತಿಯ ಸಿದ್ದಾಪುರ 2, ಜಮ್ಮೇನಹಳ್ಳಿ 3, ಹೊಸ ರಂಗಾಪುರ 1, ಸೀಗೇಹಳ್ಳಿ 2, ಹಳೆ ರಂಗಾಪುರ 3 ಹಾಗೂ ಸಿರಿಗೆರೆಯಲ್ಲಿ 13 ಸೇರಿ ಒಟ್ಟು 24 ಮನೆ ವಿತರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಸಿರಿಗೆರೆಗೆ ಸೂಳೆಕೆರೆಯಿಂದ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಟ್ಯಾಂಕರ್ ಮೂಲಕ ಪೂರೈಸಬೇಕು. ದೀಪ ದುರಸ್ತಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಗ್ರಾಪಂ ಸದಸ್ಯ ಎಂ.ಜಿ.ದೇವರಾಜ್ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ತೇರು ಮನೆ ಮುಂಭಾಗ ಕಾಂಕ್ರಿಟ್ ರಸ್ತೆ, 50 ಸಾವಿರ ಲೀಟರ್ ಸಾಮರ್ಥ್ಯದ ನೀರಿನ ತೊಟ್ಟಿ, ಪಂಚಾಯಿತಿ ಕಟ್ಟಡ ದುರಸ್ತಿ ಸೇರಿ ಹಲವು ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರೂ ಅಧಿಕಾರಿಗಳ ನಿರ್ಲಕ್ಷೃದಿಂದ ಅನುಮೋದನೆಯಾಗಿಲ್ಲ ಎಂದು ಗ್ರಾಪಂ ಸದಸ್ಯ ಎಂ. ಬಸವರಾಜಯ್ಯ ದೂರಿದರು. ಸದಸ್ಯ ಎಸ್.ಪ್ರಕಾಶ್ ದನಿಗೂಡಿಸಿದರು.

ಗ್ರಾಪಂ ಅಧ್ಯಕ್ಷೆ ರೂಪಾ ಪ್ರಕಾಶ್, ಉಪಾಧ್ಯಕ್ಷ ಎಸ್.ಮಲ್ಲೇಶ್ ಸದಸ್ಯರಾದ ದೇವರಾಜ್, ಬಸವರಾಜಯ್ಯ, ಪ್ರಕಾಶ್, ನಾಗವೇಣಿ, ತಿಪ್ಪೇಶ್ ಇತರರಿದ್ದರು.

Leave a Reply

Your email address will not be published. Required fields are marked *