
ಸಿರವಾರ: ಎಲ್ಲರಲ್ಲೂ ಸಮಾನತೆ ಭಾವ ಮೂಡಬೇಕು ಎಂದು ಹೋರಾಟ ಮಾಡಿದ ಮಹಾನ್ ವ್ಯಕ್ತಿ ಬಸವಣ್ಣ ಎಂದು ಬೆಳಗಾವಿಯ ನಾಗನೂರು ಗುರುಬಸವ ಮಠದ ಬಸವಗೀತಾ ತಾಯಿ ಹೇಳಿದರು.
ಪಟ್ಟಣದಲ್ಲಿ ಚುಕ್ಕಿ ಪ್ರತಿಷ್ಠಾನದಿಂದ ಬುಧವಾರ ಹಮ್ಮಿಕೊಂಡಿದ್ದ ಉಮಾಪತಿ ಚುಕ್ಕಿ ಅವರ 49 ನೇ ಪುಣ್ಯಸ್ಮರಣೋತ್ಸವ ಹಾಗೂ ಬಸವ ತತ್ವ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.
ಬಸವಣ್ಣ ಎಂದರೆ ಈ ನಾಡಿನ ಶಕ್ತಿ. 12ನೇ ಶತಮಾನದಲ್ಲಿಯೇ ಸಮಾನತೆ, ಸ್ತ್ರೀ ಸ್ವಾತಂತ್ರೃಕ್ಕಾಗಿ ಹೋರಾಡಿದರು, ಲಿಂಗಧಾರಣೆ ಮಾಡಿದರು ಎಂದರು. ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಈ ಸಮಾಜದಲ್ಲಿ ಬದುಕುತ್ತಾರೆ ಎನ್ನುವುದಕ್ಕೆ ಚುಕ್ಕಿ ಕುಟುಂಬ ಹಾಗೂ ಈ ಬಸವ ತತ್ವ ಚಿಂತನಾಗೋಷ್ಠಿಯೇ ಸಾಕ್ಷಿ.
ಇಂಥ ಕಾರ್ಯಕ್ರಮಗಳ ಮೂಲಕ ಅಧ್ಯಾತ್ಮವನ್ನು ಎಲ್ಲರಿಗೂ ಉಣಬಡಿಸುವುದರ ಜತೆಗೆ ಕವಿಗಳ ಕೌಶಲ ಗುರುತಿಸಿ ಬಹುಮಾನ ನೀಡುತ್ತಿರುವುದು ಶ್ಲಾಘನೀಯ. ಆದ್ದರಿಂದ ಪ್ರತಿ ಪಾಲಕರು ತಮ್ಮ ಮಕ್ಕಳಿಗೆ ವಿದ್ಯೆ, ಒಳ್ಳೆಯ ಸಂಸ್ಕಾರ ನೀಡಬೇಕು ಎಂದು ಹೇಳಿದರು.
ಚುಕ್ಕಿ ಪ್ರತಿಷ್ಠಾನದಿಂದ 2024-25ನೇ ಸಾಲಿನಲ್ಲಿ ಪ್ರೊ.ಶಾಶ್ವತಸ್ವಾಮಿ ಮಕ್ಕುಂದಿಮಠ, ಡಾ.ಸರ್ವಮಂಗಳ ಸಕ್ರಿ, ಬಾಬು ಭಂಡಾರಿಗಲ್ ಅವರಿಗೆ ಉತ್ತಮ ಕೃತಿಗಳ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರತಿಷ್ಠಾನದ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ, ಆಕಾಶವಾಣಿಯ ಪರಮೇಶ ಸಾಲಿಮಠ, ಚುಕ್ಕಿ ಶಿವಾನಂದ, ಚುಕ್ಕಿ ಮಲ್ಲಿಕಾರ್ಜುನ, ಚುಕ್ಕಿ ಶಿವಕುಮಾರ, ಚುಕ್ಕಿ ಉಮಾಪತಿ, ಹಾಸ್ಯ ಕಲಾವಿದ ನವಲಿಂಗ ಇನ್ನಿತರರಿದ್ದರು.