ಸಿರಗುಪ್ಪ: ತೀವ್ರವಾಗಿ ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳಿಗೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಬಳ್ಳಾರಿಯ ಮಕ್ಕಳ ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಈರಣ್ಣ ತಿಳಿಸಿದರು.
ನಗರದ 100 ಹಾಸಿಗೆಗಳ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಇಲಾಖೆ ಮತ್ತು ಆರೋಗ್ಯ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಆರೋಗ್ಯ ನಂದನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ ವಿವಿಧ ಗ್ರಾಮಗಳಲ್ಲಿ 40 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದ್ದು, ಅವರನ್ನು ನಗರದ ಸರ್ಕಾರಿ ಆಸ್ಪತ್ರೆಯಲ್ಲಿ 14ದಿನ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಮಕ್ಕಳೊಂದಿಗೆ ಇರುವ ತಾಯಂದಿರಿಗೆ ಪ್ರತಿನಿತ್ಯ 279 ರೂ. ರಂತೆ 14 ದಿನ ಸಹಾಯ ಧನ ನೀಡಲಾಗುತ್ತದೆ. ಸಾಮಾನ್ಯ ಅಪೌಷ್ಟಿಕತೆಯಿಂದ 1525 ಮಕ್ಕಳು ಬಳಲುತ್ತಿದ್ದು, ಅವರು ತೀವ್ರ ಅಪೌಷ್ಟಿಕತೆಗೆ ತಲುಪಬಾರದು ಎನ್ನುವ ಉದ್ದೇಶದಿಂದ ಈ ಎಲ್ಲರಿಗೂ ಉತ್ತಮ ಪೌಷ್ಟಿಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದರು.
ಸಿಡಿಪಿಒ ಜಲಾಲಪ್ಪ ಮಾತನಾಡಿದರು. ವೈದ್ಯರಾದ ಐಶ್ವರ್ಯ, ಕನಕದುರ್ಗಾ, ವಂಶಿಕೃಷ್ಣ, ಸೋಮಸಿಂಗ್ ಮತ್ತು ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.