ಸಿರಗುಪ್ಪ: ಮನೆಯೆಂಬ ಮೊದಲ ಪಾಠಶಾಲೆಯಲ್ಲಿ ತಾಯಿಯೇ ಮೊದಲ ಗುರುವಾಗಿರುತ್ತಾಳೆ. ವ್ಯಕ್ತಿಯ ಜೀವನದಲ್ಲಿ ಮಹಿಳೆ ತಾಯಿಯಾಗಿ, ಸಹೋದರಿಯಾಗಿ, ಹೆಂಡತಿಯಾಗಿ ಬಾಳಿಗೆ ಬೆಳಕು ನೀಡುವ ಜ್ಯೋತಿಯಾಗಿ ಪ್ರಮುಖ ಪಾತ್ರ ವಹಿಸುತ್ತಾಳೆ ಎಂದು ಸ್ತ್ರೀರೋಗ ತಜ್ಞೆ ಕೆ.ಗಂಗಮ್ಮ ಹೇಳಿದರು.
ಪಟ್ಟಣದ ಟಿ.ಎಸ್.ಎಚ್.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಶನಿವಾರ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಲಿಂಗ ತಾರತಮ್ಯ ಹೋಗಲಾಡಿಸಿ ಲಿಂಗ ಸಮಾನತೆ ಉಂಟಾಗುವಂತೆ ಮಾಡಿ ಉತ್ತಮ ಸಮಾಜವನ್ನು ನಿರ್ಮಿಸಲು ಇತಿಹಾಸ ಮತ್ತು ಸಮಕಾಲೀನ ಸಮಾಜದಲ್ಲಿನ ಘಟನೆಗಳಿಗೆ ಮಹಿಳೆಯರ ಕೊಡುಗೆಗಳನ್ನು ಮತ್ತು ಅವರ ಸಾಧನೆಗಳನ್ನು ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಹೆಚ್ಚಿನ ರೀತಿಯಲ್ಲಿ ತಿಳಿಸಿ ಸ್ವಾವಲಂಬನೆ ಬದುಕು ನಿರ್ಮಿಸಿಕೊಳ್ಳಲು ಸಹಾಯ ಮಾಡಬೇಕು ಎಂದರು.
ಮಹಿಳೆಯರು ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಮಾಡಿದ ಸಾಧನೆಗಳ ಕುರಿತು ತಿಳಿದುಕೊಂಡು, ಪ್ರಸ್ತುತ ದಿನಮಾನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪುರುಷರಂತೆ ಎಲ್ಲ ರಂಗಗಳಲ್ಲಿ ಸಾಧನೆ ಮಾಡಿ ಮುಂದಿನ ಪೀಳಿಗೆಯ ಮಹಿಳೆಯರಿಗೆ ಆದರ್ಶವಾಗಬೇಕು ಎಂದರು.
ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭದಲ್ಲಿ ತಂದೆ-ತಾಯಿಗಳು ಮತ್ತು ಅವರ ಸಂಬಂಧಿಗಳು ಹೆಣ್ಣು ಜನಿಸಿತು ಎಂದು ಹೇಳಿದ ತಕ್ಷಣ ಅವರ ಮುಖದಲ್ಲಿ ಯಾವುದೇ ಸಂತೋಷ ಮನೋಭಾವನೆ ಇರುವುದಿಲ್ಲ. ಅದೇ ಗಂಡು ಮಗು ಎಂದು ಹೇಳಿದರೆ ಇನ್ನಿಲ್ಲದ ಸಂತೋಷವಾಗುತ್ತದೆ. ಮುಂದಿನ ದಿನಮಾನಗಳಲ್ಲಿ ಈ ಮನೋಭಾವನೆ ಹೋಗಲಾಡಿಸಿ ಸಮಾನತೆ ಕಾಪಾಡಿಕೊಳ್ಳಲು ದಿಟ್ಟ ಹೆಜ್ಜೆ ಇಡೋಣ ಎಂದರು.