ಹಿರೇಹಳ್ಳಕ್ಕೆ ಉರುಳಿದ ಎರಡು ಲಾರಿ

ಯಲ್ಲಮ್ಮನಹಳ್ಳದ ಸೇತುವೆ ಮೇಲೆ ಹರಿದ ನೀರು | ಸೇತುವೆ ಎತ್ತರಕ್ಕೆ ಸ್ಥಳೀಯರ ಒತ್ತಾಯ

ಸಿರಗುಪ್ಪ: ತಾಲೂಕಿನ ರಾರಾವಿ ಗ್ರಾಮದ ಬಳಿಯ ಯಲ್ಲಮ್ಮನಹಳ್ಳ (ಹಿರೇಹಳ್ಳ) ಭಾನುವಾರ ರಾತ್ರಿ ಸುರಿದ ಮಳೆಗೆ ಭರ್ತಿಯಾಗಿ ಹರಿದಿದ್ದರಿಂದ ಸೋಮವಾರ ಬೆಳಗಿನ ಜಾವ ಎರಡು ಲಾರಿ ಉರುಳಿ ಬಿದ್ದಿವೆ. ಖಾಸಗಿ ಬಸ್ ಸೇತುವೆ ಬಿಟ್ಟು ಪಕ್ಕಕ್ಕೆ ವಾಲಿದೆ.

ನೆರೆಯ ಆಂಧ್ರಪ್ರದೇಶದ ಗೆಜ್ಜೆಳ್ಳಿ, ಅಲೂರು, ಹೊಳಗುಂದಿ ಗ್ರಾಮಗಳಲ್ಲಿ ಧಾರಕಾರ ಮಳೆಯಾಗಿದ್ದರಿಂದ ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಸಿರಗುಪ್ಪದಿಂದ ಆದೋನಿಗೆ ಈರುಳ್ಳಿ ಸಾಗಿಸುತ್ತಿದ್ದ ಲಾರಿ, ಇನ್ನೊಂದು ಖಾಲಿ ಲಾರಿ ಉರುಳಿ ಬಿದ್ದಿವೆ. ಚಾಲಕ, ಕ್ಲೀನರ್‌ಗಳು ಪಾರಾಗಿದ್ದಾರೆ. ಖಾಸಗಿ ಬಸ್‌ನಲ್ಲಿದ್ದ 8 ಪ್ರಯಾಣಿಕರು ರಾರಾವಿ ಗ್ರಾಮಸ್ಥರ ಸಹಾಯದಿಂದ ಪಾರಾಗಿದ್ದಾರೆ.

ಹಳ್ಳದ ಸೇತುವೆ ಎತ್ತರಿಸದೇ ಇರುವುದರಿಂದ ಮೇಲ್ಭಾಗದಲ್ಲಿ ಮಳೆಯಾದರೆ ಸೇತುವೆ ಮೇಲೆ ನೀರು ಹರಿಯುತ್ತದೆ. ಅಧಿಕಾರಿ, ಜನಪ್ರತಿನಿಧಿಗಳ ನಿರ್ಲಕ್ಷೃದಿಂದ ಅವಘಡಗಳು ನಡೆಯುತ್ತಿವೆ. ಕೂಡಲೆ ಸೇತುವೆ ಎತ್ತರಕ್ಕೆ ಕ್ರಮಕೈಗೊಳ್ಳಬೇಕು ಎಂದು ರಾರಾವಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸೇತುವೆ ಎತ್ತರಿಸುವ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರದಲ್ಲೇ ಕ್ರಮಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಎಸ್.ಸೋಮಲಿಂಗಪ್ಪ ತಿಳಿಸಿದ್ದಾರೆ. ಸ್ಥಳಕ್ಕೆ ಸಿರಗುಪ್ಪ ಸಿಪಿಐ ಮೌನೇಶ ಮಾಲಿಪಾಟೀಲ್, ಪಿಎಸ್‌ಐ ಹೊಸಕೇರಪ್ಪ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Leave a Reply

Your email address will not be published. Required fields are marked *