ಸೇತುವೆಗಳ ಮೇಲೆ ಧ್ವಜ ನೆಡಲು ಕ್ರಮ- ತಹಸೀಲ್ದಾರ್ ದಯಾನಂದ ಪಾಟೀಲ್ ಹೇಳಿಕೆ

ಸಿರಗುಪ್ಪ: ತಾಲೂಕಿನಲ್ಲಿ ಮಂಗಳವಾರ ರಾತ್ರಿ, ಬುಧವಾರ ಬೆಳಗಿನ ಜಾವ ಸುರಿದ ಭಾರಿ ಮಳೆಗೆ ತಾಲೂಕಿನಲ್ಲಿ ಒಟ್ಟು 81 ಮನೆಗಳು ಭಾಗಶಃ ಕುಸಿದಿವೆ. ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದೆ.

ತೆಕ್ಕಲಕೋಟೆಯಲ್ಲಿ 17 ಮನೆ, ಕರೂರು, ಸಿರಗುಪ್ಪ ತಲಾ 16, ಹಚ್ಚೊಳ್ಳಿ ಹೋಬಳಿಯಲ್ಲಿ 32 ಸೇರಿ ಒಟ್ಟು 81 ಮನೆಗಳು ಭಾಗಶಃ ಕುಸಿದಿವೆ. ಅದೃಷ್ಟವಶಾತ್ ಪ್ರಾಣಾಪ್ರಾಯ ಸಂಭವಿಸಿಲ್ಲ. ಶಾಲೆಗಳ ಆವರಣದಲ್ಲಿ ನೀರು ನಿಂತಿದ್ದರಿಂದ ಪ್ರಾರ್ಥನೆ ಮಾಡಲು ಸಾಧ್ಯವಾಗಲಿಲ್ಲ. ಗುಂಡಿಗನೂರು ಕೆರೆ ನೀರಿನಿಂದ ಆವೃತವಾಗಿದ್ದ ಶ್ರೀನಿವಾಸ ಅವರ ಮನೆಯಲ್ಲಿದ್ದ ಕುಟುಂಬದ ಮೂವರನ್ನು ಸ್ಥಳೀಯ ಮೀನುಗಾರರು ತೆಪ್ಪದಲ್ಲಿ ತೆರಳಿ ರಕ್ಷಿಸಿದ್ದಾರೆ.

ವೇದಾವತಿ ಹಗರಿ ನದಿ, ಯಲ್ಲಮ್ಮನ ಹಳ್ಳ, ಗರ್ಜಿಹಳ್ಳ, ದೊಡ್ಡಹಳ್ಳ, ಕೆಂಚಿಹಳ್ಳ, ಕುಲ್ಡನಾಲು, ಗೋಸಬಾಳು ಹಳ್ಳ, ಬೂದಗುಪ್ಪ ಹಳ್ಳ, ಕರೂರು ಹಳ್ಳ, ಬೈರಾಪುರ ಹಳ್ಳಗಳು ತುಂಬಿ ಹರಿಯುತ್ತಿರುವುದರಿಂದ ಬಸ್ ಸಂಚಾರ ಸ್ಥಗಿತಗೊಂಡಿದೆ. ಜನರು ಗುಂಪು ಗುಂಪಾಗಿ ಹಳ್ಳ ದಾಟುತ್ತಿದ್ದಾರೆ. ಸೇತುವೆಯಲ್ಲಿ ರಸ್ತೆ ಮಾರ್ಗ ಸೂಚಿಸಲು ತಾಲೂಕು ಆಡಳಿತ ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ತಹಸೀಲ್ದಾರ್ ದಯಾನಂದ ಪಾಟೀಲ್ ವಿವಿಧ ಗ್ರಾಮಗಳಿಗೆ ತೆರಳಿ ಹಾನಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. 81 ಮನೆಗಳು ಭಾಗಶಃ ಕುಸಿದಿದ್ದು, ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲಾಗುವುದು. ಮುಳುಗಿರುವ ಸೇತುವೆಗಳ ಮೇಲೆ ದಾರಿ ತೋರಿಸುವಂತೆ ಧ್ವಜ ನೆಡಲು ಪಿಡಬ್ಲುೃಡಿ ಅಧಿಕಾರಿಗಳಿಗೆ ಸೂಚಿಸಲಾಗುವುದು ಎಂದರು. ತೆಕ್ಕಲಕೋಟೆಯಲ್ಲಿ 43.2 ಮಿ.ಮೀ ಮಳೆಯಾಗಿದೆ. ಅದೇ ರೀತಿ ಸಿರಿಗೇರಿ 94.2, ಎಂ.ಸೂಗೂರು 24.2, ಹಚ್ಚೊಳ್ಳಿ 38.2, ರಾವಿಹಾಳ್ 45.2, ಕರೂರು 70.4, ಕೆ.ಬೆಳಗಲ್‌ನಲ್ಲಿ 41.2ಮಿ.ಮೀ. ಮಳೆಯಾಗಿದೆ.

Leave a Reply

Your email address will not be published. Required fields are marked *