<ವಿವಿಧೆಡೆ ನಿಷೇಧಾಜ್ಞೆ, ಸಿಸಿ ಕ್ಯಾಮರಾ ಅಳವಡಿಕೆ > ಸಿಪಿಐ ಚಂದನ್ಗೋಪಾಲ್ ಹೇಳಿಕೆ>
ಸಿರಗುಪ್ಪ: ಗಣೇಶ ಉತ್ಸವವನ್ನು ಶಾಂತಿ ಮತ್ತು ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ನಗರದ ಹಲವೆಡೆ ಸಿಸಿ ಕ್ಯಾಮರಾ ಅಳವಡಿಕೆ ಹಾಗೂ ಕೆಲ ಸೂಕ್ಷ್ಮಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಪಿಐ ಚಂದನ್ಗೋಪಾಲ್ ಹೇಳಿದರು.
ಹಲವು ದಶಕಗಳಿಂದ ನಡೆಯುತ್ತಿದ್ದ ಗಣೇಶ ಉತ್ಸವ ಮೆರವಣಿಗೆ ಮಾರ್ಗ ಬದಲಿಸಿದ ಕಾರಣ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೆಲ ಪ್ರದೇಶಗಳಲ್ಲಿ ತಹಸೀಲ್ದಾರ್ ಎಂ.ಸುನೀತಾ ಅವರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸೋಮವಾರ ಬೆಳಗ್ಗೆ 10 ರಿಂದ ಮಂಗಳವಾರ ಬೆಳಗ್ಗೆ 8ಗಂಟೆವರೆಗೆ ಆದೇಶ ಜಾರಿಯಲ್ಲಿರಲಿದೆ. ದೇಶನೂರು ರಸ್ತೆಯ ಸ್ಥಳಕ್ಕೆ ಸಾರ್ವಜನಿಕರು ಗುಂಪು ಗುಂಪಾಗಿ ಪ್ರವೇಶ ಮಾಡುವಂತಿಲ್ಲ. ನಿಯಮ ಮೀರಿದರೆ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ಗಣೇಶ ಉತ್ಸವ ಮೆರವಣಿಗೆ ಮೇಲೆ ನಿಗಾವಹಿಸುವ ಹಿನ್ನೆಲೆಯಲ್ಲಿ ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ 10 ಕಡೆ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಭದ್ರತೆಗೆ ಇಬ್ಬರು ಡಿವೈಎಸ್ಪಿ, 6 ಸಿಪಿಐ, 8 ಪಿಎಸ್ಐ, 15 ಎಎಸ್ಐ, 150 ಪೇದೆಗಳು ಹಾಗೂ ಮುಖ್ಯಪೇದೆಗಳು, ಐಆರ್ಬಿ, ಕೆಎಸ್ಆರ್ಪಿ ಹಾಗೂ ಡಿಅರ್ನ ತಲಾ ಒಂದು ತುಕಡಿ ಹಾಗೂ 40 ಸ್ಥಳೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.