ಮಾನವನ ವಿಕಾಸ ಕುರಿತು ಹಿರೇಹರ್ಲ ಗುಡ್ಡ ಪ್ರದೇಶದಲ್ಲಿ ಮಹತ್ವದ ಸಂಶೋಧನೆ

20 ದಿನಗಳ ಕಾಲ ಉತ್ಖನನ |ನಾನಾ ಕುರುಹುಗಳು ಪತ್ತೆ

ಸಿರಗುಪ್ಪ (ಬಳ್ಳಾರಿ): ಇತಿಹಾಸದ ಹಲವು ಕಾಲಘಟ್ಟಗಳಿಗೆ ಸಾಕ್ಷಿಯಾಗಿರುವ ತಾಲೂಕಿನ ತೆಕ್ಕಲಕೋಟೆ ವ್ಯಾಪ್ತಿ ಹಿರೇಹರ್ಲ ಗುಡ್ಡ ಪ್ರದೇಶದಲ್ಲಿ ಉತ್ಖನನ ಕಾರ್ಯ ಭರದಿಂದ ಸಾಗಿದೆ. ಮಾನವನ ಇತಿಹಾಸ ಆರಂಭ ಕಾಲದ ಸಂಸ್ಕೃತಿ ಜತೆಗೆ ಆದಿಮಾನವರು, ಸೂಕ್ಷ್ಮ ಶಿಲಾಯುಗ, ನವಶಿಲಾಯುಗ, ಲೋಹ ಶಿಲಾಯುಗದ ಬಗ್ಗೆ ಭಾನುವಾರದಿಂದ ಸಂಶೋಧನೆ ನಡೆಯುತ್ತಿದೆ.

ಅಮೆರಿಕದ ಒನ್ನಾಂಟದ ಹಾರ್ಟ್‌ವಿಕ್ ಕಾಲೇಜಿನ ಮಾನವಶಾಸ್ತ್ರ (ಆಂಥ್ರೋಪಾಲಜಿ) ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ನಮೀತ್ ಸಂಜಯ್ ಸುಗಂದಿ ನೇತೃತ್ವದಲ್ಲಿ 20 ದಿನಗಳ ಕಾಲ ಉತ್ಖನನ ನಡೆಯಲಿದೆ. ನ್ಯಾಷನಲ್ ಜಿಯಾಗ್ರಫಿ ಸಂಸ್ಥೆ ಅನುದಾನ ಒದಗಿಸಿದ್ದು, ಮೈಸೂರು ವಿವಿ ಪ್ರಾಚೀನ ಇತಿಹಾಸ ಪುರಾತತ್ವ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಉತ್ಖನದಲ್ಲಿ ತೊಡಗಿದ್ದಾರೆ.

ಆಯಾ ಕಾಲಘಟ್ಟಗಳ ಜನರು ಈ ಭಾಗದಲ್ಲಿ ನೆಲೆಸಿರುವುದಕ್ಕೆ ಅನೇಕ ಆಧಾರಗಳು ದೊರೆತಿವೆ. ಹೆಚ್ಚಿನ ಸಂಶೋಧನೆಗೆ ಈಗ ಕಾಲ ಕೂಡಿ ಬಂದಿದೆ. ಬೆಟ್ಟಗುಡ್ಡಗಳಲ್ಲಿ ನೈಸರ್ಗಿಕವಾಗಿ ನಿರ್ಮಾಣವಾಗಿರುವ ಕೆರೆ, ಗುಹೆಗಳು, ನೀರಿನ ಲಭ್ಯತೆ, ಸುರಕ್ಷತೆ, ಹುಲ್ಲುಗಾವಲು ಪ್ರದೇಶವು ಪಶುಪಾಲನೆಗೆ ಅನುಕೂಲ ಆಗಿರುವುದರಿಂದ ಆದಿ ಮಾನವರಿಗೆ ಈ ಪ್ರದೇಶ ವಾಸಯೋಗ್ಯವಾಗಿತ್ತು. ಕೃಷಿ, ಪಶು ಪಾಲನೆ ಹಲವು ಕುರುಹುಗಳು ಸಹ ಇಲ್ಲಿ ಪತ್ತೆಯಾಗಿವೆ ಎಂದು ಡಾ.ನಮೀತ್ ಸಂಜಯ್ ಸುಗಂದಿ ವಿವರಿಸಿದ್ದಾರೆ.

ಈ ಭಾಗದಲ್ಲಿ ಸೂಕ್ಷ್ಮ ಯುಗದ ಕುರಿತು ಇತಿಹಾಸ ಸಂಶೋಧಕ ಡಾ.ನಾಗರಾಜರಾವ್ ಸಂಶೋಧನೆ ನಡೆಸಿದ್ದಾರೆ. ಉತ್ಖನನ ವೇಳೆ ಗುಹೆಗಳು, ನಿತ್ಯ ಬಳಕೆಯ ಪಾತ್ರೆ, ಪರಿಕರಗಳು, ಅಸ್ಥಿಪಂಜರ ದೊರೆತಿವೆ. ಸಂಗನಕಲ್ಲು, ಕುರುಗೋಡು, ಕುಡತಿನಿಗಳಲ್ಲಿ ಆದಿಮಾನವರ ನೆಲೆಗಳ ಕುರಿತು ಅನೇಕ ಸಂಶೋಧನೆಗಳು ನಡೆದಿವೆ. ಕಬ್ಬಿಣ ಯುಗದಲ್ಲಿ ತೆಕ್ಕಲಕೋಟೆಯಲ್ಲಿ ಆಗಿರುವ ಕೃಷಿ ಅಭಿವೃದ್ಧಿ ಜತೆಗೆ ಸಾಂಸ್ಕೃತಿಕ ನೆಲೆಗಟ್ಟುಗಳನ್ನು ಪತ್ತೆ ಹಚ್ಚಲು ಹೆಚ್ಚಿನ ಸಂಶೋಧನೆ ಕೈಗೊಳ್ಳಲಾಗಿದೆ ಎಂದು ಮೈಸೂರು ವಿವಿ ಪ್ರಾಚೀನ ಇತಿಹಾಸ, ಪುರಾತತ್ವ ವಿಭಾಗದ ಪ್ರಾಧ್ಯಾಪಕಿ ಡಾ.ವಿ.ಶೋಭಾ ತಿಳಿಸಿದ್ದಾರೆ.

ಪುಣೆ, ಮೈಸೂರು ವಿವಿಯ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳಾದ ನವದೆಹಲಿಯ ಶೋಭನಾ ಅಯ್ಯರ್ ಸೇರಿ ಹಲವು ವಿದ್ಯಾರ್ಥಿಗಳು ಸಂಶೋಧನೆ ಕೈಗೊಂಡಿದ್ದಾರೆ. ಆನೆಗೂಂದಿ ಉತ್ಖನನದ ನುರಿತ ಕಾರ್ಮಿಕರಾದ ರಘು, ವೆಂಕಟೇಶ ಸೇರಿ 10ಕ್ಕೂ ಹೆಚ್ಚು ಕಾರ್ಮಿಕರು ಉತ್ಖನಕ್ಕೆ ಕೈಜೋಡಿಸಿದ್ದಾರೆ.

ಸಿರಗುಪ್ಪ ತಾಲೂಕು ತೆಕ್ಕಲಕೋಟೆ, ಉಡೇಗೋಳ, ನಿಟ್ಟೂರು, ನಡವಿ ಸುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳುವ ಸಂಶೋಧನೆ, ಉತ್ಖನದ ವೇಳೆ ಸಿಗುವ ಅವಶೇಷಗಳನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿ, ಅದರ ಆಧಾರದ ಮೇಲೆ ಮುಂದೆ ಕೈಗೊಳ್ಳಬೇಕಾದ ಉತ್ಖನನ ಕುರಿತು ನಿರ್ಧರಿಸಲಾಗುವುದು.
| ಡಾ.ನಮೀತ್ ಸಂಜಯ್ ಸುಗಂದಿ ಸಹಾಯಕ ಪ್ರಾಧ್ಯಾಪಕ ಅಮೆರಿಕಾದ ಒನ್ನಾಂಟದ ಹಾರ್ಟ್‌ವಿಕ್ ಕಾಲೇಜು

Leave a Reply

Your email address will not be published. Required fields are marked *