ಪಾಕ್​ ವಿರುದ್ಧ ಇನ್ನೊಂದು ಸ್ಟ್ರೈಕ್​ ನಡೆಸಿದ್ದೇವೆ ಎಂದು ಟ್ವೀಟ್​ ಮಾಡಿದ್ದ ಅಮಿತ್​ ಷಾಗೆ ಆರ್​ಜೆಡಿ ಪ್ರತಿಕ್ರಿಯೆ ಇದು…

ನವದೆಹಲಿ: ನಿನ್ನೆ ವಿಶ್ವಕಪ್​ ಪಂದ್ಯಾವಳಿಯಲ್ಲಿ ಪಾಕ್​ ವಿರುದ್ಧ ಭಾರತ ಜಯಗಳಿಸಿದ್ದಕ್ಕೆ ಟ್ವಿಟರ್​ನಲ್ಲಿ ಸಂತಸ ವ್ಯಕ್ತಪಡಿಸಿದ್ದ ಗೃಹಸಚಿವ ಅಮಿತ್​ ಷಾ, ಪಾಕ್​ ಮೇಲೆ ಇನ್ನೊಂದು ಸ್ಟ್ರೈಕ್​ ನಡೆಸಿದ್ದೇವೆ ಎಂದು ಟ್ವೀಟ್​ ಮಾಡಿದ್ದರು.

ಅಮಿತ್​ ಷಾ ಅವರ ಈ ಟ್ವೀಟ್​ಗೆ ರಾಷ್ಟ್ರೀಯ ಜನತಾ ದಳ ಇಂದು ಪ್ರತಿಕ್ರಿಯೆ ನೀಡಿದ್ದು, ಸರ್​, ದಯವಿಟ್ಟು ಬಿಹಾರದಲ್ಲಿ ಕಾಡುತ್ತಿರುವ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ -ಎಇಎಸ್ ವೈರಾಣು ವಿರುದ್ಧ ಸ್ಟ್ರೈಕ್​ ನಡೆಸಿ ಎಂದು ಟ್ವೀಟ್​ ಮಾಡಿದೆ. ಈ ಮೂಲಕ ಬಿಹಾರದ ಮಕ್ಕಳ ಪಾಲಿಗೆ ರಕ್ಕಸನಂತೆ ಕಾಡುತ್ತಿರುವ ಉರಿಯೂತ ಸಂಬಂಧಿ ವೈರಸ್​ ಬಗ್ಗೆ ಆರ್​ಜೆಡಿ ಗೃಹಸಚಿವರ ಗಮನ ಸೆಳೆದಿದೆ.

ಮುಜಾಫರ್​ಪುರ, ವೈಶಾಲಿ, ಶಿಯೋಹರ್ ಜಿಲ್ಲೆಗಳಲ್ಲಿ ಕಳೆದ 16 ದಿನಗಳಲ್ಲಿ 100ಕ್ಕೂ ಹೆಚ್ಚು ಮಕ್ಕಳು ಈ ವೈರಾಣುವಿನಿಂದ ಮೃತಪಟ್ಟಿದ್ದಾರೆ. ಇನ್ನೂ ಸುಮಾರು 300 ಮಕ್ಕಳು ವಿವಿಧ ಆಸ್ಪತ್ರೆಗಳ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದೊಂದು ವೈರಾಣು ಜ್ವರವಾಗಿದ್ದು ಪ್ರಾರಂಭದಲ್ಲಿ ಸೆಳೆತ, ತಲೆನೋವು ಇರುತ್ತದೆ. ಶುಗರ್ ಲೆವಲ್​ ಕಡಿಮೆ ಇದ್ದವರಿಗೆ ಅಕ್ಯುಟ್ ಎನ್‌ಸೆಫಾಲಿಟಿಸ್ ಸಿಂಡ್ರೋಮ್ ಬರುತ್ತಿದ್ದು, ಅದೇ ಸಾವಿಗೆ ಕಾರಣವಾಗುತ್ತಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ.

ನಿನ್ನೆ ಪಾಕ್​ ವಿರುದ್ಧ ಗೆದ್ದ ಭಾರತಕ್ಕೆ ಅಮಿತ್​ ಷಾ ಶುಭ ಹಾರೈಸಿ, ಪಾಕ್​ ವಿರುದ್ಧ ಮತ್ತೊಂದು ಸ್ಟ್ರೈಕ್​ ಆಗಿದೆ. ನಿಮ್ಮೆಲ್ಲರ ಬಗ್ಗೆ ನಮಗೆ ಹೆಮ್ಮೆಯೆನಿಸುತ್ತದೆ. ಈ ಗೆಲುವುನ್ನು ಇಡೀ ಭಾರತ ಆಚರಿಸುತ್ತದೆ ಎಂದಿದ್ದರು.

Leave a Reply

Your email address will not be published. Required fields are marked *