ಮುಳುಗಿದ ಕಂಪ್ಲಿ-ಗಂಗಾವತಿ ಸೇತುವೆ, ವಾಹನ ಸಂಚಾರ ಸ್ಥಗಿತ

ಕಂಪ್ಲಿ: ತುಂಗಭದ್ರಾ ಜಲಾಶಯದಿಂದ ನದಿಗೆ ದಾಖಲೆ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ಕಂಪ್ಲಿ-ಕೋಟೆ ಪ್ರದೇಶ ನಡುಗಡ್ಡೆಯಂತಾಗಿದೆ.

ಭಾನುವಾರ ಬೆಳಗ್ಗೆ 6ಕ್ಕೆ ಕಂಪ್ಲಿ-ಗಂಗಾವತಿಗೆ ಸಂಪರ್ಕ ಕಲ್ಪಿಸುವ ಸೇತುವೆ ಮುಳುಗಡೆಯಾಗಿದ್ದು, ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಬುಕ್ಕಸಾಗರ ಬಳಿಯ ಕಡೆಬಾಗಿಲು ಸೇತುವೆ ಮೂಲಕ ವಾಹನಗಳು ಸಂಚರಿಸುತ್ತಿವೆ. ಗಂಡುಗಲಿ ಕುಮಾರರಾಮ ದ್ವಾರ ಬಾಗಿಲಿಗೆ ನೀರು ಹರಿದುಬಂದಿದೆ. ಬನವಾಸಿ ರಸ್ತೆ ಮಾರ್ಗವಾಗಿ ರಾಮಸಾಗರಕ್ಕೆ ತೆರಳುತ್ತಿದ್ದ ಸ್ಥಳೀಯರು ತೆಪ್ಪ ಆಶ್ರಯಿಸಿದ್ದಾರೆ.

ನದಿ ನೀರಿನಿಂದ ಕಂಪ್ಲಿ-ಕೋಟೆ ಪ್ರದೇಶದ 1 ಮತ್ತು 13ನೇ ವಾರ್ಡ್, ಶ್ರೀಕಾಳಮ್ಮ ದೇವಸ್ಥಾನ, ಮೀನುಗಾರರ ಕಾಲನಿ ಜಲಾವೃತಗೊಂಡಿವೆ. ಮೊಸಳೆ, ಹಾವು, ಚೇಳು ಸೇರಿ ವಿಷ ಜಂತುಗಳು ಕಾಣಿಸಿಕೊಳ್ಳುತ್ತಿರುವುದರಿಂದ ಸ್ಥಳೀಯರು ಕಂಗೆಟ್ಟಿದ್ದಾರೆ. ಮನೆಯಲ್ಲಿದ್ದ ಆಭರಣ, ನಗದು, ಆಹಾರ ಧಾನ್ಯ ರಕ್ಷಣೆಗೆ ಹೆಣಗಾಡುತ್ತಿದ್ದಾರೆ. ನೀರಿನ ಪ್ರಮಾಣ ಹೆಚ್ಚಳವಾಗಿದ್ದರಿಂದ ಕಂಪ್ಲಿ ಕೋಟೆ ಸಹಿಪ್ರಾ ಶಾಲೆಯಲ್ಲಿ ತೆರೆದಿದ್ದ ತಾತ್ಕಾಲಿಕ ಪರಿಹಾರ ಕೇಂದ್ರವನ್ನು 8ನೇ ವಾರ್ಡ್‌ನ ತಳವಾರ ಓಣಿಯ ಶಾಲೆಗೆ ಸ್ಥಳಾಂತರಿಸಲಾಗಿದೆ. ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಹಾಗೂ ಸಾಂಕ್ರಾಮಿಕ ರೋಗಗಳ ತಡೆಗೆ ಔಷಧ ದಾಸ್ತಾನು ಮಾಡಲಾಗಿದೆ.

ಹೊಸಪೇಟೆ ಎಸಿ ಪಿ.ಎನ್.ಲೋಕೇಶ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ನದಿ ಬಳಿ ಠಿಕಾಣಿ ಹೂಡಿದ್ದಾರೆ. ತುರ್ತು ರಕ್ಷಣಾ ಕಾರ್ಯಕ್ಕೆ ಹಂಪಿಯಿಂದ 1 ಬೋಟ್ ತರಿಸಲಾಗಿದೆ. ಶಾಸಕ ಜೆ.ಎನ್.ಗಣೇಶ್ ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು.