ಬೆಂಗಳೂರು: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎರಡು ಬಾರಿ ಪೂರ್ವಸಿದ್ಧತಾ ಪರೀಕ್ಷೆ ನಡೆಸಲು ಮುಂದಾಗಿದ್ದಕ್ಕೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಒಂದೇ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ತೀರ್ವನಿಸಿದೆ.
ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯೇ ಪ್ರಶ್ನೆಪತ್ರಿಕೆ ರೂಪಿಸಿ ಪೂರ್ವಸಿದ್ಧತೆ ಪರೀಕ್ಷೆ ನಡೆಸುತ್ತದೆ ಎಂದು ಶಿಕ್ಷಣ ಇಲಾಖೆ ಮೊದಲು ಹೇಳಿತ್ತು. ಆದರೆ, ಕೊನೆಯ ಕ್ಷಣದಲ್ಲಿ ರಾಜ್ಯ ಮುಖ್ಯೋಪಾಧ್ಯಾಯರ ಸಂಘಕ್ಕೂ ಪರೀಕ್ಷೆ ನಡೆಸುವುದಕ್ಕೆ ಅನುಮತಿ ನೀಡಿತ್ತು. ಇದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಎರಡು ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಬೇಕಾಗಿತ್ತು. ಆದರೆ, ಶಿಕ್ಷಣ ಇಲಾಖೆಯ ಈ ನಿಯಮಕ್ಕೆ ತಿದ್ದುಪಡಿ ತಂದಿದ್ದು, ರಾಜ್ಯದಲ್ಲಿರುವ 14,989 ಪ್ರೌಢಶಾಲೆಗಳ ಪೈಕಿ 2,123 ಶಾಲೆಗಳಿಗೆ ಮುಖ್ಯೋಪಾಧ್ಯಾಯರ ಸಂಘ ಪರೀಕ್ಷೆ ನಡೆಸಲಿದೆ. ಉಳಿದ 12,886 ಪ್ರೌಢಶಾಲೆಗಳಿಗೆ ಮಂಡಳಿ ಪರೀಕ್ಷೆ ನಡೆಸಲಿದೆ. ಪರೀಕ್ಷೆ ನಡೆಸಲು ಮಾಡಬೇಕಾದ ವೆಚ್ಚದ ಮಾಹಿತಿಯನ್ನು ಬಿಡುಗಡೆ ಮಾಡಿದೆ. ಮಂಡಳಿಯ ಜವಾಬ್ದಾರಿ ಮತ್ತು ಮುಖ್ಯೋಪಾಧ್ಯಾಯರ ಸಂಘದ ಜವಾಬ್ದಾರಿಯನ್ನು ಸ್ಪಷ್ಟವಾಗಿ ಪಟ್ಟಿ ಮಾಡಿ ತಿಳಿಸಿದೆ. ಪರೀಕ್ಷೆಗಳಿಗೆ ಮಂಡಳಿಯೇ ಪ್ರಶ್ನೆಪತ್ರಿಕೆ ರೂಪಿಸಿ ನೀಡಲಿದೆ.
ಅವಕಾಶ ನೀಡಿತ್ತು: ಪ್ರತಿ ವರ್ಷ ಶಾಲಾ ಮುಖ್ಯೋಪಾಧ್ಯಾಯರ ಸಂಘ ಪರೀಕ್ಷೆ ನಡೆಸುತ್ತದೆ. ಈ ಹಿಂದೆ ಪರೀಕ್ಷೆ ನಡೆಸಲು ವಿದ್ಯಾರ್ಥಿಗಳಿಂದ ಹೆಚ್ಚಿನ ಪರೀಕ್ಷಾ ಶುಲ್ಕ ವಸೂಲಿ ಮಾಡಿತ್ತು. ಅಲ್ಲದೆ, ಪ್ರಶ್ನೆಪತ್ರಿಕೆ ಸೋರಿಕೆ ಆಗಿ ವಿವಾದಕ್ಕೆ ಕಾರಣವಾಗಿತ್ತು. ಅಂದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಮೊದಲು ಪರೀಕ್ಷೆ ನಡೆಸಲು ಅವಕಾಶ ನೀಡಿರಲಿಲ್ಲ. ಕೊನೆಯ ಕ್ಷಣದಲ್ಲಿ ಷರತ್ತುಬದ್ಧ ಅನುಮತಿ ನೀಡಿದ್ದರು. 2020ರಿಂದ ಮಂಡಳಿಯೇ ಪರೀಕ್ಷೆ ನಡೆಸಲಿದೆ ಎಂದು ತಿಳಿಸಿದ್ದರು.
ಈ ವರ್ಷ ಮಂಡಳಿಯೇ ನಡೆಸುತ್ತದೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಸಂಘಕ್ಕೆ ಅವಕಾಶ ನೀಡಿದ್ದರಿಂದ ವಿದ್ಯಾರ್ಥಿಗಳು ಅನವಶ್ಯಕವಾಗಿ ಎರಡು ಬಾರಿ ಪೂರ್ವ ಸಿದ್ಧತಾ ಪರೀಕ್ಷೆ ಎದುರಿಸಬೇಕಾಗಿತ್ತು.