ಸಂಗೀತದಲ್ಲಿ ವಿಭಿನ ದೃಷ್ಟಿಕೋನ ಹೊಂದಿದ್ದ ರಾಜು ಅನಂತಸ್ವಾಮಿ

ಮೈಸೂರು: ಗಾಯಕ ರಾಜು ಅನಂತಸ್ವಾಮಿ ಅವರು ಸಂಗೀತದಲ್ಲಿ ವಿಭಿನ್ನ ದೃಷ್ಟಿಕೋನ ಹೊಂದಿದ್ದರು ಎಂದು ಗಾಯಕಿ ರಮ್ಯಾ ವಸಿಷ್ಠ ಹೇಳಿದರು.

ನಗರದ ವೀಣೆ ಶೇಷಣ್ಣ ಭವನದ ಗಾನಭಾರತಿಯಲ್ಲಿ ಹೋಟೆಲ್ ಮಾಲೀಕ ಕೃಷ್ಣದಾಸ್ ಪುರಾಣಿಕ್ ಮತ್ತು ಮೈಸೂರು ಅನಂತಸ್ವಾಮಿ ಮೆಮೋರಿಯಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ನಾದಾಮೃತ ಸಂಗೀತ ವಿದ್ಯಾಲಯ ವತಿಯಿಂದ ಆಯೋಜಿಸಿದ್ದ ರಾಜು ಗಾನಲಹರಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಜು ಅನಂತಸ್ವಾಮಿ ಅವರು ಸಂಗೀತದಲ್ಲಿ ಅನಂತಸ್ವಾಮಿ ಮತ್ತು ಸಿ.ಅಶ್ವಥ್ ಅವರಿಗಿಂತಲೂ ವಿಭಿನ್ನ ಚಿಂತನೆ ಹೊಂದಿದ್ದರು. ಸಂಗೀತ ತರಬೇತಿ ನೀಡುವಲ್ಲಿ ಅವರದ್ದೇ ಒಂದು ರೀತಿಯ ವಿಧಾನವಿತ್ತು. ಬಹಳ ಅಚ್ಚುಕಟ್ಟಾಗಿ ಸಂಗೀತ ಹೇಳಿಕೊಡುತ್ತಿದ್ದರು ಎಂದರು.

ಪ್ರಸ್ತುತ ಸುಗಮ ಸಂಗೀತವು ರಾಜ್ಯೋತ್ಸವ ಹಾಗೂ ಗಣೇಶೋತ್ಸವ ಕಾರ್ಯಕ್ರಮ ವೇದಿಕೆಗಳಲ್ಲಿ ಹಾಡಿ ಮುಗಿಸುವುದಕ್ಕೆ ಮಾತ್ರ ಸೀಮಿತವಾಗಿದೆ. ಇದು ಬದಲಾಗಬೇಕು. ಸುಗಮ ಸಂಗೀತವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ಕನ್ನಡ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿದ್ದರೆ ರಾಜು ಅನಂತಸ್ವಾಮಿ ಅವರ ಸಂಗೀತವನ್ನು ಆಲಿಸಿ ಅಭ್ಯಸಿಸುವ ಗುಣ ಅಳವಡಿಸಿಕೊಳ್ಳಬೇಕು. ಅವರ ಹಾಡುಗಳನ್ನು ಆಲಿಸುತ್ತಿದ್ದರೆ ಉತ್ತಮ ರಾಗ ಸಂಯೋಜಕರು ಹಾಗೂ ಸಾಹಿತಿಗಳು ಆಗಬಹುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಡಾ.ಸಿ.ಜಿ.ನರಸಿಂಹನ್ ಮಾತನಾಡಿ, ಎಲ್ಲ ಸಂಗೀತ ವಿಧಗಳಿಗೂ ಶಾಸ್ತ್ರೀಯ ಸಂಗೀತವೇ ತಳಹದಿಯಾಗಿದೆ ಎಂದು ಅಭಿಪ್ರಾಯಪಟ್ಟರು. ವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳು ರಾಜು ಅನಂತಸ್ವಾಮಿ ಅವರ ಸಂಯೋಜನೆಯ ಗೀತೆಗಳನ್ನು ಹಾಡಿದರು. ಹಿರಿಯ ರಂಗಕರ್ಮಿ ಹಾಗೂ ಗಾಯಕ ಕಿರಗಸೂರು ರಾಜಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವೇದಿಕೆಯಲ್ಲಿ ರಾಜು ಅನಂತಸ್ವಾಮಿ ಅವರ ತಾಯಿ ಶಾಂತಾ ಅನಂತಸ್ವಾಮಿ, ನಾದಾಮೃತ ಸಂಗೀತ ವಿದ್ಯಾಲಯದ ಪ್ರಾಂಶುಪಾಲ ನಿತಿನ್ ರಾಜಾರಾಂ ಇದ್ದರು.

Leave a Reply

Your email address will not be published. Required fields are marked *