ಉಡುಪಿ ಜಿಪಂಗೆ ಸಿಂಧು ಸಿಇಒ

ಉಡುಪಿ: ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸ್ಥಾನಕ್ಕೆ ಸಿಂಧು ಬಿ.ರೂಪೇಶ್ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಬೆಂಗಳೂರಿನಲ್ಲಿ ಹಣಕಾಸು ಇಲಾಖೆ ಬಜೆಟ್ ಮತ್ತು ಸಂಪನ್ಮೂಲ ವಿಭಾಗದ ಡೆಪ್ಯುಟಿ ಸೆಕ್ರೆಟರಿ ಆಗಿದ್ದ ಸಿಂಧು ಬಿ.ರೂಪೇಶ್ ವರ್ಗಾವಣೆ ಆಗಿದ್ದರೂ, ಅವರಿಗೆ ಸರ್ಕಾರ ಹುದ್ದೆ ನಿಗದಿ ಆಗಿರಲಿಲ್ಲ.

ಜಿಲ್ಲೆಯ ಸಿಇಒ ಆಗಿದ್ದ ಶಿವಾನಂದ ಕಾಪಶಿ ಅವರನ್ನು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಹುದ್ದೆಗೆ ಮತ್ತು ಜಿಲ್ಲೆಯ ಸಿಇಒ ಹುದ್ದೆಗೆ ಬೆಂಗಳೂರಿನ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ವಸಂತಕುಮಾರ್ ಐಎಎಸ್ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ನ.13 ರಂದು ಆದೇಶ ಹೊರಡಿಸಿತ್ತು. ನ.19 ರಂದು ಹೊರಡಿಸಿದ ನೂತನ ಆದೇಶದಲ್ಲಿ ಸಿಂಧು ಬಿ.ರೂಪೇಶ್ ಅವರನ್ನು ಸರ್ಕಾರ ನೇಮಕಗೊಳಿಸಿ, ಪಿ.ವಸಂತ ಕುಮಾರ್ ವರ್ಗಾವಣೆ ರದ್ದು ಮಾಡಿದೆ. ನೂತನ ಸಿಇಒ ಶೀಘ್ರ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಜಿಲ್ಲಾ ಪಂಚಾಯಿತಿ ಮೂಲಗಳು ತಿಳಿಸಿವೆ.