More

    ಹೊಸ ಹುಮ್ಮಸ್ಸಿನಲ್ಲಿ ಸಿಂಧು, ಸೈನಾ

    ಕೌಲಾಲಂಪುರ: ಹೊಸ ವರ್ಷದ ಮೊದಲ ಸವಾಲಿಗೆ ಸಜ್ಜಾಗಿರುವ ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು, ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ಶುಭಾರಂಭದ ನಿರೀಕ್ಷೆಯೊಂದಿಗೆ ಮಂಗಳವಾರ ದಿಂದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ.

    ಕಳೆದ ವರ್ಷ ಸ್ವಿಜರ್ಲೆಂಡ್​ನ ಬಸೆಲ್ ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮೆರೆದರೂ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಂಧು ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದ್ದಾರೆ. ಗಾಯದ ಸಮಸ್ಯೆ ಯಿಂದಾಗಿ ಕಳೆದ ನವೆಂಬರ್​ನಲ್ಲಿ ಸಯ್ಯದ್ ಮೋದಿ ಇಂಟರ್​ನ್ಯಾಷನಲ್ ಟೂರ್ನಿಯಿಂದ ಹೊರಬಿದ್ದಿದ್ದ ಕನ್ನಡತಿ ಅಶ್ವಿನಿ ಪೊನ್ನಪ್ಪ ಮರಳಿ ಕಣಕ್ಕಿಳಿಯಲಿದ್ದಾರೆ. ಟೋಕಿಯೊ ಒಲಿಂಪಿಕ್ಸ್​ಗೆ 7 ತಿಂಗಳಷ್ಟೇ ಬಾಕಿ ಉಳಿದಿದ್ದು, ಸಿದ್ಧತೆ ದೃಷ್ಟಿಯಿಂದಲೂ ಭಾರತೀಯ ಷಟ್ಲರ್​ಗಳ ಪಾಲಿಗೆ ಈ ಟೂರ್ನಿ ಮಹತ್ವ ಪಡೆದಿದೆ.

    ಟೂರ್ನಿಯಲ್ಲಿ 6ನೇ ಶ್ರೇಯಾಂಕ ಹೊಂದಿರುವ ಸಿಂಧು ಮೊದಲ ಸುತ್ತಿನ ಹೋರಾಟದಲ್ಲಿ ರಷ್ಯಾದ ಇಜೆನಿಯಾ ಕೊಸೆಟ್​ಸ್ಕೈಯಾ ಅವರನ್ನು ಎದುರಿಸಲಿದ್ದಾರೆ. ಎಂಟರ ಘಟ್ಟದಲ್ಲಿ ವಿಶ್ವ ನಂ.1 ಚೀನಾ ತೈಪೆಯ ತೈ ಜು ಯಿಂಗ್ ಎದುರಾಗುವ ಸಾಧ್ಯತೆಗಳಿವೆ. ಭಾರತದ ಮತ್ತೋರ್ವ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ಕಳೆದ ವರ್ಷ ಇಂಡೋನೇಷ್ಯಾ ಓಪನ್ ಜಯಿಸಿದ ಬಳಿಕ ಸಾಲು ಸಾಲು ಸೋಲು ಕಾಣುತ್ತಿದ್ದು, ಮೊದಲ ಸುತ್ತಿನಲ್ಲಿ ಅರ್ಹತಾ ಸುತ್ತಿನ ಸ್ಪರ್ಧಿ ಎದುರಾಗಲಿದ್ದಾರೆ. ಒಲಿಂಪಿಕ್ ಸಿದ್ಧತೆಗಾಗಿ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್​ನಿಂದ ಹೊರಗುಳಿದಿರುವ ಕಿಡಂಬಿ ಶ್ರೀಕಾಂತ್​ಗೆ ಮೊದಲ ಸುತ್ತಿನಲ್ಲೇ ಕಠಿಣ ಸವಾಲು ಎದುರಾಗಿದೆ. ಚೀನಾ ತೈಪೆಯ 2ನೇ ಶ್ರೇಯಾಂಕಿತ ಆಟಗಾರ ಚೌ ಟಿನ್ ಚೆನ್ ವಿರುದ್ಧ ಸೆಣಸಲಿದ್ದಾರೆ. -ಪಿಟಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts