ತುರ್ವಿಹಾಳ ಹತ್ತಿರದ ಕೆರೆ ದಡ ಕುಸಿತ

<ಕುಡಿವ ನೀರು ಪೂರೈಕೆಗೆ ನಿರ್ಮಾಣ ಸ್ಥಳೀಯರಲ್ಲಿ ಹೆಚ್ಚಿದ ಆತಂಕ>

ಸಿಂಧನೂರು: ನಗರಕ್ಕೆ ನಿರಂತರ ನೀರು ಪೂರೈಸಲು ತುರ್ವಿಹಾಳ ಹತ್ತಿರ ನಿರ್ಮಾಣದ ಕೊನೆ ಹಂತದಲ್ಲಿದ್ದ ಕೆರೆ ಕುಸಿದಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ನಗರದ ಮಹತ್ವಾಕಾಂಕ್ಷೆ 24×7 ಯೋಜನೆಗೆ 99 ಕೋಟಿ ರೂ. ವ್ಯಯಿಸಲಾಗುತ್ತಿದೆ. ಹಲವು ಆರೋಪ- ಪ್ರತ್ಯಾರೋಪ, ವಿಳಂಬದಿಂದ ಕಾಮಗಾರಿಗೆ ಹಿನ್ನಡೆಯಾಗಿತ್ತು. ಕೆರೆ ದಡ ದೊಡ್ಡ ಪ್ರಮಾಣದಲ್ಲಿ ಕುಸಿತಗೊಂಡಿದ್ದು, ತಡೆಗೋಡೆಯ ಬಿರುಕು ಅಧಿಕಾರಿಗಳ ನಿದ್ದೆಗೆಡಿಸಿದೆ. ದಡ ಇನ್ನಷ್ಟು ಕುಸಿತವಾದರೆ, ಕೆರೆ ಒಡೆಯುವ ಆತಂಕ ಎದುರಾಗಿದೆ.

ಕೆರೆ ದಡ ನಿರ್ಮಾಣ ವೇಳೆ ಕಲ್ಲು ಪಿಚಿಂಗ್ ಸಮರ್ಪಕ ಮಾಡಿಲ್ಲ. ತರಾತುರಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿರುವುದರಿಂದ ಪ್ರಮಾದವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ. ಈ ಹಿಂದೆ ಕಾಮಗಾರಿ ಕಳಪೆಯಾಗಿದೆ ಎಂದು ವೆಂಕಟರಾವ್ ನಾಡಗೌಡ ಸರ್ಕಾರಕ್ಕೆ ಪತ್ರ ಬರೆದು ತನಿಖೆಗೆ ಒತ್ತಾಯಿಸಿದ್ದರು. ಈಗ ಅವರು ಯಾವ ಕ್ರಮಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.