ಸಿಂಧನೂರು: ಬಸವಣ್ಣ ಹಾಗೂ ಇತರರ ಕುರಿತು ಪಠ್ಯ ಪುಸ್ತಕದಲ್ಲಿರುವ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಬಸವಕೇಂದ್ರ, ಲಿಂಗಾಯತ, ಬಸವಪರ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ಬುಧವಾರ ಪ್ರತಿಭಟನೆ ನಡೆಸಿತು.
9ನೇ ತರಗತಿಯ ಸಮಾಜ ವಿಜ್ಞಾನ ಪರಿಷ್ಕೃತ ಪಠ್ಯ ಪುಸ್ತಕದಲ್ಲಿ ವಿಶ್ವಗುರು ಬಸವಣ್ಣ ಕುರಿತ ಪಾಠದಲ್ಲಿ ಹಲವು ದೋಷಗಳು ತುಂಬಿವೆ. ಉಪನಯನದ ನಂತರ ಕೂಡಲಸಂಗಮಕ್ಕೆ ನಡೆದರು ಎಂದು ಪರಿಷ್ಕರಿಸಲಾಗಿದೆ. ಇದು ತಪ್ಪು. ಬಸವಣ್ಣನವರು ತಮ್ಮ ಸಹೋದರಿ ಅಕ್ಕನಾಗಮ್ಮನಿಗೆ ಇಲ್ಲದ ಉಪನಯನ ನನಗೇಕೆ? ಎಂದು ಧಿಕ್ಕರಿಸಿ ಕೂಡಲಸಂಗಮಕ್ಕೆ ಹೋದದ್ದು ಐತಿಹಾಸಿಕ ಸಂಗತಿಯಾಗಿದೆ. ಶೈವ ಗುರುಗಳ ಸಾನ್ನಿಧ್ಯದಲ್ಲಿ ಲಿಂಗ ದೀಕ್ಷೆಯನ್ನು ಪಡೆದು ಎಂದು ಪುಸ್ತಕದಲ್ಲಿ ನಮೂದಿಸಲಾಗಿದೆ. ಇದು ತಪ್ಪು. ಇಷ್ಟಲಿಂಗ ಬಸವಣ್ಣನವರ ಪರಿಕಲ್ಪನೆಯಲ್ಲಿ ಮೂಡಿ ಬಂದದ್ದು. ಗುರು ಬಸವಣ್ಣನವರೇ ಇಷ್ಟಲಿಂಗ ಜನಕರು. ಎಲ್ಲ ಶರಣರು ತಮ್ಮ ವಚನಗಳಲ್ಲಿ ಬಸವಣ್ಣನೇ ಇಷ್ಟಲಿಂಗದ ಜನಕನೆಂದು ದಾಖಲಿಸಿದ್ದಾರೆ. ಹೀಗಾಗಿ ಪಠ್ಯದಲ್ಲಿರುವ ಲೋಪಸರಿಪಡಿಸಬೇಕು. ಪಠ್ಯವನ್ನು ವತ್ತೊಮ್ಮೆ ಮುದ್ರಣ ಮಾಡಬೇಕು ಎಂದು ಒತ್ತಾಯಿಸಿದರು.
ನಗರದ ಬಸವವೃತ್ತದಿಂದ ತಹಸಿಲ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಯದ್ದಲದೊಡ್ಡಿಯ ಮಹಾಲಿಂಗ ಸ್ವಾಮೀಜಿ, ಬಸವಕೇಂದ್ರದ ಜಿಲ್ಲಾಧ್ಯಕ್ಷ ವೀರಭದ್ರಪ್ಪ ಕುರುಕುಂದಿ, ಮಾಜಿ ಅಧ್ಯಕ್ಷ ಶರಣಪ್ಪ ಟೆಂಗಿನಕಾಯಿ, ಹಾಲಿ ತಾಲೂಕು ಅಧ್ಯಕ್ಷ ನಾಗಭೂಷಣ ನವಲಿ, ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಪಿ.ರುದ್ರಪ್ಪ ಕುರುಕುಂದ, ಅಮರೇಶ ಗುರಿಕಾರ, ಬಸಲಿಂಗಪ್ಪ ಬಾದರ್ಲಿ, ವೀರಭದ್ರಗೌಡ ಅಮರಾಪುರ, ಕನ್ನಡಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪಂಪಯ್ಯಸ್ವಾಮಿ ಸಾಲಿಮಠ, ಪ್ರಗತಿಪರ ಸಂಘಟನೆಯ ಚಂದ್ರಶೇಖರ ಗೊರೇಬಾಳ, ಕೆ.ಜಿಲಾನಿಪಾಷಾ, ರಂಗಪ್ಪ ಜಿ.ಎಂ., ಹನುಮರಡ್ಡಿ ನಾಡಗೌಡ, ಶಂಕರ ಗುರಿಕಾರ, ನಾರಾಯಣ ಬೆಳಗುರ್ಕಿ, ಅಮರೇಶ ಗಿರಿಜಾಲಿ, ಅಲ್ಲಮಪ್ರಭು ಪೂಜಾರ ಇದ್ದರು.