ನಿಸ್ವಾರ್ಥ ಸೇವಾ ಮನೋಭಾವವೇ ಶ್ರೇಷ್ಠ – ಅನ್ನದಾನ ಶಾಸ್ತ್ರೀ

ಸಿಂಧನೂರು: ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಅಂದಾಗ ಸಮಾಜದ ಸ್ವಾಸ್ಥ್ಯ ಸುಸ್ಥಿರವಾಗಿರುತ್ತದೆ ಎಂದು ಅನ್ನದಾನಶಾಸ್ತ್ರೀ ಹೇಳಿದರು.

ನಗರದ ಮೂರು ಮೈಲ್‌ಕ್ಯಾಂಪ್ ಕರಿಬಸವ ನಗರದ ರಂಭಾಪುರಿ ಶಾಖಾಮಠದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶ್ರೀಮಠದ ಸೋಮನಾಥ ಶಿವಾಚಾರ್ಯ ಶ್ರೀಗಳ 12ನೇ ದ್ವಾದಶ ಗುರು ಪಟ್ಟಾಧಿಕಾರ 7 ದಿನಗಳ ಭಕ್ತರ ಹಿತ ಚಿಂತನಾ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಮನುಷ್ಯನಲ್ಲಿ ಸ್ವಾರ್ಥ ಹೆಚ್ಚುತ್ತಿದೆ. ಇದರಿಂದ ಪರಿಸರಕ್ಕೆ ಪೆಟ್ಟು ಬೀಳುತ್ತಿದೆ. ಮಳೆ ಅಭಾವ ಹೆಚ್ಚಿದೆ. ಪ್ರತಿಯೊಬ್ಬರಲ್ಲಿ ಪರಿಸರ ಕಾಳಜಿ ಮೂಡಿದಾಗ ಮಾತ್ರ ಸಮೃದ್ಧತೆ ಪಡೆಯಲು ಸಾಧ್ಯ. ಶ್ರೀಮಠದ ಶ್ರೀಗಳು ಭಕ್ತರ ಒಡನಾಡಿಯಾಗಿದ್ದು, ಸದಾ ಲೋಕ ಕಲ್ಯಾಣ ಬಯಸುತ್ತಿದ್ದಾರೆ ಎಂದರು.

ಶ್ರೀಮಠದ ಸೋಮನಾಥ ಶಿವಾಚಾರ್ಯಸ್ವಾಮೀಜಿ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ವಕೀಲ ಡಿ.ಎಸ್.ಕಲ್ಮಠ, ಮುಖಂಡರಾದ ಬಸನಗೌಡ ಮೇಟಿ, ತೋಂಟದಾರ್ಯ ಸಿದ್ಧಾಂತಿಮಠ, ಅಮರಯ್ಯಸ್ವಾಮಿ ಅಲಬನೂರು, ಶಂಕರಗೌಡ ಎಲೆಕೂಡ್ಲಿಗಿ, ಅಮರೇಗೌಡ ಮಲ್ಲಾಪುರ, ಮುತ್ತು ಪಾಟೀಲ್, ಬಸವಲಿಂಗಯ್ಯ ಚಿರತನಾಳ, ಅಮರಯ್ಯಸ್ವಾಮಿ ಎಲೆಕೂಡ್ಲಿಗಿ ಇದ್ದರು.