3 ಟಿಎಂಸಿ ಅಡಿ ನೀರು ಹರಿಸಲು ಒತ್ತಾಯ – ರೈತರಿಂದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ

ಸಿಂಧನೂರು: ಸಿಂಧನೂರು ತಾಲೂಕಿಗೆ ಕುಡಿವ ನೀರಿನ ಉದ್ದೇಶಕ್ಕಾಗಿ ಮೂರು ಟಿಎಂಸಿ ಅಡಿ ನೀರು ಎಡದಂಡೆ ನಾಲೆಗೆ ತುಂಗಭದ್ರಾ ಜಲಾಶಯದಿಂದ ಹರಿಸಬೇಕು ಎಂದು ಒತ್ತಾಯಿಸಿ, 36, 36/1 ಕಾಲುವೆ ವ್ಯಾಪ್ತಿಯ ರೈತರು ಹಾಗೂ ಸಾರ್ವಜನಿಕರು ಸೋಮವಾರ ನಗರದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈಗಾಗಲೇ ನೀರಿನ ನಿರ್ವಹಣೆ ಕುರಿತು ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ. ಇದರಿಂದ ಸಮರ್ಪಕ ಕುಡಿವ ನೀರಿನ ಸಮಸ್ಯೆ ಸಂಪೂರ್ಣ ನೀಗುವುದಿಲ್ಲ. ಕಾಲುವೆಗೆ ಹರಿಬಿಡುವ ಬಿಡುವ ನೀರಿನ ಪ್ರಮಾಣ ಮತ್ತು ಅವಧಿ ತುಂಬ ಕಡಿಮೆ ಇದ್ದು, ಒಂದೂವರೆ ಟಿಎಂಸಿ ಅಡಿ ನೀರು ಎಡದಂಡೆ ನಾಲೆ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕ ಕೆರೆಗಳು ತುಂಬಿಸಲು ಸಾಧ್ಯವಾಗುವುದಿಲ್ಲ. ಸದ್ಯ ಎಲ್ಲ ಹಳ್ಳಗಳು ಸಂಪೂರ್ಣ ಬತ್ತಿ ಹೋಗಿವೆ. ಹೀಗಾಗಿ, ನಿರ್ಧಾರವನ್ನು ಬದಲಿಸಿ ಮುಖ್ಯಕಾಲುವೆಗೆ ಮೂರು ಟಿಎಂಸಿ ಅಡಿ ನೀರು 18 ದಿನಗಳವರೆಗೆ ಹರಿಸಬೇಕು. ಸಿಂಧನೂರಿನ ಎಲ್ಲ ಕೆರೆ, ಹಳ್ಳಗಳನ್ನು ತುಂಬಿಸಿ ನೀರಿನ ಬವಣೆ ನಿವಾರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಸಿದರು.

ಚನ್ನಬಸವ ಹೊಸಳ್ಳಿ, ದೊರೆಸ್ವಾಮಿ ನಾಯ್ಡು, ದುರುಗಪ್ಪ, ಭಾಸ್ಕರ್, ಅಶೋಕ ನಲ್ಲಾ, ಕೃಷ್ಣಾರೆಡ್ಡಿ, ಶಂಕರಗೌಡ, ಅಮರೇಶಪ್ಪ ಹಾಗೂ ನೂರಾರು ಸಂಖ್ಯೆಯ ಸಾರ್ವಜನಿಕರು ಇದ್ದರು.

Leave a Reply

Your email address will not be published. Required fields are marked *