ನೀರು ಹರಿಸಿಕೊಳ್ಳುವುದೇ ರೈತರಿಗೆ ಸವಾಲು ಪ್ರಸ್ತಾವನೆ ಕಸದ ಬುಟ್ಟಿಗೆ
ಅಶೋಕ ಬೆನ್ನೂರು

ಸಿಂಧನೂರು: ತಾಲೂಕಿನ ಶೇ.80 ಅಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸುವ ತುಂಗಭದ್ರಾ ಎಡದಂಡೆ ನಾಲೆಯ ಉಪಕಾಲುವೆಗಳಿಗೆ ದಶಕ ಕಳೆದರೂ ದುರಸ್ತಿ ಭಾಗ್ಯ ಕೂಡಿ ಬಂದಿಲ್ಲ. ಇದರಿಂದ ಉಪಕಾಲುವೆಗಳೆಲ್ಲ ಹಳ್ಳವಾಗಿ ಮಾರ್ಪಟ್ಟು ಟೇಲೆಂಡ್ ಭಾಗಕ್ಕೆ ಸಮರ್ಪಕ ನೀರು ಹರಿಯದ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ 1.88 ಲಕ್ಷ ಎಕರೆ ಭೂಮಿಗೆ ತುಂಗಭದ್ರಾ ಎಡದಂಡೆ ನಾಲೆ ಕಾಲುವೆಯಿಂದ ನೀರುಣಿಸಲಾಗುತ್ತಿದೆ. ಇದರಲ್ಲಿ ಅತಿ ದೊಡ್ಡದಾದ 36ನೇ ಉಪಕಾಲುವೆಗೆ 45 ಸಾವಿರ ಎಕರೆ, 40ನೇ ಉಪಕಾಲುವೆ 25 ಸಾವಿರ ಸಾವಿರ ಎಕರೆ ಹಾಗೂ 54 ನೇ ಉಪಕಾಲುವೆಗೆ 75 ಸಾವಿರ ಎಕರೆ ಭೂಮಿ ಇದೆ. ಸುಮಾರು ವರ್ಷಗಳಿಂದಲೂ ರೈತರು ಈ ಕಾಲುವೆ ಮೂಲವೇ ನೀರು ಪಡೆದು ಮುಂಗಾರು ಹಿಂಗಾರು ಹಂಗಾಮಿನಲ್ಲಿ ಭತ್ತ ಬೆಳೆದುಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷದಿಂದ ದೊಡ್ಡ ಉಪಕಾಲುವೆ ವ್ಯಾಪ್ತಿಯಲ್ಲಿ ಕಾಲುವೆ ಹೆಚ್ಚು ಹಾಳಾಗಿರುವುದರಿಂದ ಕೆಳ ಭಾಗಕ್ಕೆ ನೀರು ಹರಿಯದೆ ರೈತಾಪಿ ವರ್ಗ ಸಂಕಷ್ಟ ಎದುರಿಸುತ್ತಿದೆ.
36ನೇ ಉಪಕಾಲುವೆ ವ್ಯಾಪ್ತಿಯಲ್ಲಿ 45 ಸಾವಿರ ಎಕರೆಗೆ ನೀರು ಹರಿಯಬೇಕಿದ್ದು ಆದರೆ ಕಾಲುವೆ ಹಾಳಾಗಿರುವುದರಿಂದ ನೀರು ಮೇಲ್ಭಾಗದಲ್ಲಿಯೇ ಹೆಚ್ಚು ಹರಿಯುತ್ತಿದೆ. ಅಲ್ಲಲ್ಲಿ ರೈತರು ತಮ್ಮ ಹೊಲಗಳಿಗೆ ದೊಡ್ಡ ಕಾಲುವೆ ಮಾಡಿಕೊಂಡಿದ್ದು ನೀರೆಲ್ಲ ಅಲ್ಲಿಯೇ ಹರಿದು ಹೋಗುತ್ತಿದೆ. ಕೆಳ ಭಾಗದ 10 ಸಾವಿರ ಎಕರೆ ಪ್ರದೇಶದಷ್ಟು ಭೂಮಿಗೆ ಸಮರ್ಪಕ ನೀರು ಹರಿಯದೆ ಮುಂಗಾರು ಹಾಗೂ ಹಿಂಗಾರಿನಲ್ಲಿ ರೈತರು ಬೆಳೆ ನಷ್ಟ ಹೊಂದುವಂತಾಗಿದೆ. ಇನ್ನೂ ಎಡದಂಡೆ ನಾಲೆ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಭೂಮಿಗೆ ನೀರುಣಿಸುವ 54ನೇ ಉಪಕಾಲುವೆ ಪರಿಸ್ಥಿತಿಯೂ ಹೊರತಾಗಿಲ್ಲ. ಇಲ್ಲಿಯು ಕೆಳ ಭಾಗದ 20 ಸಾವಿರ ಎಕರೆ ಭೂಮಿಗೆ ನೀರು ಹರಿಯುವುದಿಲ್ಲ. ಒಣ ಬೆಳೆ ಬೆಳೆದುಕೊಳ್ಳಲು ರೈತರು ಸಂಕಷ್ಟ ಪಡುವಂತಾಗಿದೆ. 54ನೇ ಉಪಕಾಲುವೆ ನೀರು ಆರ್.ಎಚ್.ಕ್ಯಾಂಪ್‌ಗಳ ಭೂಮಿಗೂ ಹರಿಯಬೇಕಿದ್ದು ಮೇಲ್ಭಾಗದಲ್ಲಿ ಭತ್ತ ಕಟಾವು ನಂತರ ಕೆಳ ಭಾಗಕ್ಕೆ ನೀರು ಹರಿಯುವುದರಿಂದ ಬೆಳೆ ಬೆಳೆದುಕೊಳ್ಳಲು ಸಾಧ್ಯವಾಗಿಲ್ಲ.
ನಯಾಪೈಸೆ ಅನುದಾನ ಇಲ್ಲ
ತಾಲೂಕು ವ್ಯಾಪ್ತಿಯಲ್ಲಿರುವ 36ನೇ ಉಪಕಾಲುವೆಯಿಂದ ಹಿಡಿದು 54ನೇ ಉಪಕಾಲುವೆವರೆಗೂ ಕಾಲುವೆಗಳು ದುರಸ್ತಿ ಕಾಣದೆ ಹಾಳಾಗಿವೆ. ದಶಕದಿಂದ ಕಾಲುವೆಗಳ ಆಧುನೀಕರಣ ಅಥವಾ ದುರಸ್ತಿಗೆ ಅನುದಾನ ನೀಡಲು ನಿರ್ಲಕ್ಷ್ಯ ವಹಿಸುವ ಮೂಲಕ ರೈತರನ್ನು ಕಡೆಗಣಿಸಲಾಗುತ್ತಿದೆ. ಸಮರ್ಪಕವಾಗಿ ನೀರು ಹರಿಯಲು ತುರ್ತು ಕಾಲುವೆ ದುರಸ್ತಿ ನಡೆಯಬೇಕಿತ್ತು. ಮಾರ್ಚ್‌ದಿಂದ ಜೂನ್ ತಿಂಗಳವರೆಗೆ ಕಾಲುವೆ ದುರಸ್ತಿಗೆ ಅವಕಾಶ ಇದ್ದು ಆದರೆ ದಶಕದಿಂದ ಅನುದಾನ ಹೊಂದಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಇಲ್ಲಿಯವರೆಗೆ ನಯಾಪೈಸೆ ಅನುದಾನ ಇಲ್ಲ. ಈ ಹಿಂದೆ ಕಾಲುವೆ ಮೇಲೆ ಗ್ಯಾಂಗ್‌ಮನ್‌ಗಳಿದ್ದರೂ, ಅವರು ಅಲ್ಲಲ್ಲಿ ಬೆಳೆದ ಜಾಲಿ ಸೇರಿ ಇತರ ದುರಸ್ತಿಗೆ ಮುಂದಾಗುತ್ತಿದ್ದರೂ ಈಗ ಅವರೂ ಇಲ್ಲ. ಈಗ ಕಾಲುವೆಗಳ ಪರಿಸ್ಥಿತಿ ಬಿಡುಗಾಯಿಸಿದ್ದು ಮುಂದಿನ ದಿನ ಗಳಲ್ಲಿ ಕಾಲುವೆಗಳಿಗೆ ನೀರು ಹರಿಬಿಟ್ಟರೂ, ಕೆಳ ಭಾಗಕ್ಕೆ ನೀರು ಹರಿಯದೆ ಸಮಸ್ಯೆ ಉದ್ಭವವಾಗಲಿದೆ. ಈಗಲಾದರೂ ಸರ್ಕಾರ ನೀರಾವರಿ ಇಲಾಖೆಯಿಂದ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಮನ್ನಣೆ ನೀಡಿ, ಮುಂದಿನ ದಿನಗಳಲ್ಲಿ ದುರಸ್ತಿ ಕಾರ್ಯಕೈಗೊಳ್ಳಲು ಅನುಕೂಲ ಮಾಡಿಕೊಡ ಬೇಕೆಂಬುದು ರೈತರ ಒತ್ತಾಸೆಯಾಗಿದೆ.
ಸಿಂಧನೂರು ತಾಲೂಕಿನ 36ನೇ ಉಪಕಾಲುವೆ ಸೇರಿ ಇತರ ಯಾವ ಕಾಲುವೆಗಳ ದುರಸ್ತಿಗೆ ಅನುದಾನ ಇಲ್ಲ. ತಾತ್ಕಾಲಿಕ ದುರಸ್ತಿಗೂ ಹಣ ಇಲ್ಲ. ನೀಲು ಪೋಲಾಗದಂತೆ ಎಚ್ಚರವಹಿಸಲಾಗಿದೆ. ಅಲ್ಲಲ್ಲಿ ಬಿದ್ದಿದ್ದ ಬೋಂಗಾ ದುರಸ್ತಿಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಅನುದಾನ ಬಂದರೆ ದುರಸ್ತಿ ಕೈಗೊಳ್ಳಲಾಗುವುದು.
ಹನುಮಂತಪ್ಪ ಎಇಇ, ನೀರಾವರಿ ಇಲಾಖೆ,
ತುರ್ವಿಹಾಳ ಉಪವಿಭಾಗ, ಸಿಂಧನೂರು.
ಕಳೆದ ದಶಕದಿಂದ ತಾಲೂಕಿನ ಯಾವುದೇ ಉಪಕಾಲುವೆಗಳ ದುರಸ್ತಿ ನಡೆದಿಲ್ಲ. ಇದರಿಂದ ಕೆಳ ಭಾಗದ ರೈತರಿಗೆ ಸಮರ್ಪಕ ನೀರು ಸಿಗದಂತಾಗಿದೆ. ಈಗಾಗಲೇ ಸಂಘಟನೆಯಿಂದಲೂ ಹೋರಾಟ ನಡೆಸಲಾಗಿದ್ದರೂ, ಅನುದಾನ ನೀಡಿಲ್ಲ. ಸಣ್ಣ ರಿಪೇರಿಯು ಇಲಾಖೆಯಿಂದ ಸಾಧ್ಯವಾಗಿಲ್ಲ.
ಶರಣಪ್ಪ ಮರಳಿ ಜಿಲ್ಲಾಧ್ಯಕ್ಷ,
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಸಿಂಧನೂರು.