blank

ಅಕಾಲಿಕ ಮಳೆ ದರ ಕುಸಿತ ಆಘಾತ

blank

ಅಶೋಕ ಬೆನ್ನೂರು

blank

ಸಿಂಧನೂರು : ತಾನೊಂದು ಬಗೆದರೆ ದೈವವೊಂದು ಬಗೆಯಿತು.. ಎಂಬಂಥ ಸ್ಥಿತಿ ರೈತರಿಗೆ ಬಂದಿದೆ. ಒಂದೆಡೆ ಮಳೆ ಆಘಾತ, ಮತ್ತೊಂದೆಡೆ ಬೆಲೆ ಕುಸಿತದ ಸಂಕಷ್ಟಕ್ಕೆ ಬೆಳೆಗಾರರು ಒಳಗಾಗಿದ್ದಾರೆ.

ತುಂಗಭದ್ರಾ ಎಡದಂಡೆ ನಾಲೆ ಹಾಗೂ ನದಿ ನೀರನ್ನು ಬಳಸಿ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾಗಿ ಬೆಳೆದಿದ್ದ ಬೇಸಿಗೆ ಬೆಳೆಯ ಭತ್ತ ಇನ್ನೇನು ಕಟಾವು ಮಾಡಿ ಮಾರುಕಟ್ಟೆಗೆ ಒಯ್ಯಬೇಕೆಂಬ ರೈತರ ಲೆಕ್ಕಾಚಾರಕ್ಕೆ ಮಳೆ ಆಘಾತ ನೀಡಿದೆ. ಈಗಾಗಲೇ ಎರಡ್ಮೂರು ಬಾರಿ ಬಿದ್ದ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಪಡೆಯಲು ಆಗುತ್ತಿಲ್ಲ. ಮೇನಲ್ಲಿ ಆಗಬೇಕಿದ್ದ ಬಿರುಗಾಳಿ-ಮಳೆ ಈಗಲೇ ಬಂದಿರುವುದು ಬೆಳೆಗಾರರನ್ನು ಸಂಕಷ್ಟಕ್ಕೀಡು ಮಾಡಿದೆ.

ಶೇ.50-60 ಪ್ರಮಾಣದಲ್ಲಿ ಭತ್ತ ಕಟಾವು ಆಗಿದೆ. ಶೇ.40 ಭಾಗದಲ್ಲಿ ಭತ್ತದ ಬೆಳೆ ಇನ್ನೂ ಕೆಂಪಾಗಿದ್ದು, ಕಟಾವು ಬಾಕಿ ಇದೆ. ಈ ಮಧ್ಯೆ ಸಂಜೆಯಾದರೆ ಸಾಕು ಬಿರುಗಾಳಿ-ಮಳೆ ವಕ್ಕರಿಸುತ್ತಿರುವುದರಿಂದ ಬೆಳೆ ನೆಲಕ್ಕೆ ಅಪ್ಪಳಿಸಲಿದೆ ಎಂಬ ಆತಂಕ ರೈತರನ್ನು ಕಾಡುತ್ತಿದೆ. ಇನ್ನೊಂದೆಡೆ ಕಟಾವು ಮಾಡಿಕೊಂಡಿರುವ ಭತ್ತವನ್ನು ರೈತರು ಊರು ಹೊರವಲಯ ಪ್ರದೇಶದಲ್ಲಿ ಒಣಗಿ ಹಾಕಿದ್ದು, ಮಳೆಯಿಂದ ಆ ಭತ್ತವು ತೋಯ್ದು ಮೊಳಕೆ ಬಿಡುತ್ತಿರುವುದು ಇನ್ನಷ್ಟು ಸಮಸ್ಯೆ ತಂದೊಡ್ಡಿದೆ. ಈ ಪರಿಸ್ಥಿತಿಯಿಂದ ರೈತರು ಕಂಗಾಲಾಗಿದ್ದಾರೆ. ಕಳೆದ ನವೆಂಬರ್‌ನಲ್ಲೂ ಭತ್ತದ ಬೆಳೆ ಕಟಾವು ಸಂದರ್ಭ ಅಕಾಲಿಕ ಮಳೆಯಿಂದ 23 ಸಾವಿರ ಎಕರೆ ಪ್ರದೇಶ ಭತ್ತ ನಷ್ಟವಾಗಿತ್ತು.

ಮಾರುಕಟ್ಟೆಯಲ್ಲಿಲ್ಲ ಬೆಲೆ

ಕಳೆದ ಮುಂಗಾರಿನಲ್ಲಿಯೂ ಮಾರುಕಟ್ಟೆಯಲ್ಲಿ ಸೋನಾ ಹಾಗೂ ಆರ್‌ಎನ್‌ಆರ್ ತಳಿಯ ಭತ್ತದ ಬೆಲೆ ಪಾತಾಳಕ್ಕೆ ಕಸಿದಿತ್ತು. ಈಗ ಅದೇ ಪರಿಸ್ಥಿತಿ ಇದೆ. ಸೋನಾ ಮಸೂರಿ 75 ಕೆಜಿಗೆ 1300-1400 ರೂ. ಬೆಲೆ ಇದ್ದರೆ, ಆರ್‌ಎನ್‌ಆರ್ ತಳಿಯ ಭತ್ತ 75 ಕೆಜಿಗೆ 1600-1700 ರೂ. ಇದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 200-300 ರೂ. ಬೆಲೆ ಕುಸಿತಗೊಂಡಿದ್ದು ರೈತರು ಎಕರೆಗೆ 45 ಚೀಲ ಭತ್ತ ಬೆಳೆದರೂ ಖರ್ಚು ಮಾಡಿದ ಹಣ ತೆಗೆಯುವುದೆ ಸವಾಲಾಗಿದೆ. ಎಕರೆಗೆ 5 ರಿಂದ 10 ಸಾವಿರ ರೂ. ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪಡೆದ ಸಾಲ ತೀರಿಸಲು ಪರದಾಡುವಂತಾಗಿದೆ. ಈಗ ಬೆಳೆದಿರುವ ಭತ್ತವು ಸಾಲಕ್ಕೆ ಸರಿ ಹೊಂದುತ್ತದೆ. ಮುಂದಿನ ಬದುಕಿಗೆ ಮತ್ತೆ ರೈತರು ಸಾಲದ ಮೊರೆ ಹೋಗಬೇಕಿದೆ.

ಖರೀದಿ ಕೇಂದ್ರವೇ ಇಲ್ಲ

ಸರ್ಕಾರ ಈಗಾಗಲೇ ಹಿಂಗಾರು ಜೋಳದ ಖರೀದಿ ಕೇಂದ್ರ ತೆರೆಯಲು ಮುಂದಾಗಿದ್ದರೂ ಈವರೆಗೆ ನೋಂದಣಿ-ಖರೀದಿ ಪ್ರಕ್ರಿಯೆಯೇ ಇಲ್ಲ. ಈ ಮಧ್ಯೆ ತುರ್ತಾಗಿ ಭತ್ತದ ಖರೀದಿ ಕೇಂದ್ರ ತೆರೆಯುವುದಕ್ಕೂ ಮುಂದಾಗುತ್ತಿಲ್ಲ. ಪ್ರತಿ ಬಾರಿಯೂ ರೈತರು ಭತ್ತ ಮಾರಿದ ನಂತರವೇ ಭತ್ತ ಖರೀದಿ ಕೇಂದ್ರ ಆರಂಭಿಸಲಾಗುತ್ತದೆ. ಇದರಿಂದ ಯಾರಿಗೆ ಲಾಭ ಎನ್ನುವುದು ಸರ್ಕಾರವೇ ತೀರ್ಮಾನ ಮಾಡಬೇಕಿದೆ.

 

ಮಳೆಯಿಂದಾಗಿ ಬೆಳೆ ನಷ್ಟದ ಸರ್ವೇ ನಡೆಸಿದ್ದು, ತಿಪ್ಪನಹಟ್ಟಿ ಗ್ರಾಮದಲ್ಲಿ ಅತಿ ಹೆಚ್ಚು ಹಾನಿಯಾಗಿದೆ. ಸರ್ವೇ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಭಾನುವಾರ ರಾತ್ರಿ ಬಿದ್ದ ಮಳೆಯಿಂದ ಬೆಳೆ ನಷ್ಟದ ಬಗ್ಗೆ ಮಾಹಿತಿ ಪಡೆಯಲಾಗುವುದು.
| ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು

 

ಸರ್ಕಾರ ರೈತರನ್ನು ಕಡೆಗಣಿಸಿದೆ. ಕಳೆದ 15 ದಿನಗಳಿಂದ ಆಗಾಗ ಮಳೆ ಸುರಿದು ರೈತರು ಬೆಳೆ ನಷ್ಟ ಅನುಭವಿಸಿದ್ದಾರೆ. ಆದರೆ, ಒಂದೆರಡು ಕಡೆ ಮಾತ್ರ ಸರ್ವೇ ನಡೆಸಲಾಗಿದೆ. ಭತ್ತ ಖರೀದಿ ಕೇಂದ್ರ ತೆರೆದರೆ ಮಾರುಕಟ್ಟೆಯಲ್ಲಿ ಭತ್ತದ ಬೆಲೆ ಹೆಚ್ಚಳವಾಗಲಿದೆ. ಶೀಘ್ರವೇ ಭತ್ತ ಖರೀದಿ ಕೇಂದ್ರ ತೆರೆಯಬೇಕು.
| ಕೆ.ಕರಿಯಪ್ಪ ಬಿಜೆಪಿ ಮುಖಂಡ, ಸಿಂಧನೂರು

 

 

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank