ತಾಪಂ ಸಭೆಯಲ್ಲಿ ಕಳಪೆ ಮೊಟ್ಟೆಯ ಕತೆ!

ಸಿಂಧನೂರು (ರಾಯಚೂರು): ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ಪೂರೈಕೆಯಾಗುತ್ತಿದ್ದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಪಂ ಸದಸ್ಯರು ಒತ್ತಾಯಿಸಿದರು.

ನಗರದ ತಾಪಂ ಸಭಾಂಗಣದಲ್ಲಿ ಜೈನಾಬಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸುಲ್ತಾನಪುರ ತಾಪಂ ಸದಸ್ಯೆ ಲಕ್ಷ್ಮಿ ದೇವಿ ಕಳಪೆ ಮೊಟ್ಟೆ ಬಗ್ಗೆ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಧ್ವನಿಗೂಡಿಸಿದ ಸಾಲಗುಂದ, ಒಳಬಳ್ಳಾರಿ ತಾಪಂ ಸದಸ್ಯರು, ಬಹುತೇಕ ಅಂಗನವಾಡಿ ಕೇಂದ್ರಗಳಿಗೆ ಕಳಪೆ ಮೊಟ್ಟೆ ಪೂರೈಕೆ ಆಗುತ್ತಿದೆ. ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿದರು. ಪ್ರತಿಕ್ರಿಯಿಸಿದ ಸಿಡಿಪಿಒ ಯೋಗಿತಾಬಾಯಿ, ಮೊದಲೆಲ್ಲ ಟೆಂಡರ್ ಕರೆದು ಮೊಟ್ಟೆ ಪೂರೈಕೆ ಮಾಡಲಾಗುತ್ತಿತ್ತು. ನೇರವಾಗಿ ಖರೀದಿ ಮಾಡಲಾಗುತ್ತಿದೆ. ಕಳಪೆ ಕಂಡು ಬಂದರೆ ಸೂಕ್ತ ಕ್ರಮಕ್ಕೆ ಮುಂದಾಗಲಾಗುವುದು ಎಂದು ಭರವಸೆ ನೀಡಿದರು.

ಸಾಲಗುಂದ ತಾಪಂ ಸದಸ್ಯ ಹನುಮೇಶ ಮಾತನಾಡಿ, ಅಂಗನವಾಡಿಗಳಿಗೆ ಬರುವ ಆಹಾರ, ಮೊಟ್ಟೆ ಬಗ್ಗೆ ಮಾಹಿತಿ ಕೊಡಬೇಕು. ಅಂಗನವಾಡಿಗಳಿಗೆ ಭೇಟಿ ನೀಡುವಾಗ ಸದಸ್ಯರ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ನರಸಿಂಹರಾವ್ ಮಾತನಾಡಿ, ಅಂಗನವಾಡಿಗಳ ಬಗ್ಗೆ ಸಮರ್ಪಕ ಮಾಹಿತಿ ಕೊಡಬೇಕು. ಕನ್ನಡದಲ್ಲಿ ಶುದ್ಧವಾಗಿ ಬರೆದುಕೊಡಬೇಕು. ತಪ್ಪು ಮಾಹಿತಿ ಇರಕೂಡದು. ಸಿಡಿಪಿಒ ಕಚೇರಿಗೆ ಮಾಸಿಕ 24 ಸಾವಿರ ರೂ. ಪಾವತಿಸುವುದಕ್ಕಿಂತ ತಾಪಂದಲ್ಲೇ ಒಂದು ಕಟ್ಟಡ ಪಡೆದು ಸಿಂಧನೂರು/ತುರ್ವಿಹಾಳ ಸಿಡಿಪಿಒ ಕಚೇರಿ ಒಂದುಗೂಡಿಸಿ ಖರ್ಚು ಉಳಿಸಬೇಕು ಸಲಹೆ ನೀಡಿದಾಗ ಇದಕ್ಕೆ ಎಲ್ಲ ಸದಸ್ಯರು ಒಪ್ಪಿಗೆ ಸೂಚಿಸಿದರು.

ಸುಲ್ತಾನಪುರ ತಾಪಂ ಸದಸ್ಯೆ ಲಕ್ಷ್ಮಿದೇವಿ ಮಾತನಾಡಿ, ಎರಡು ವರ್ಷ ಕಳೆದರೂ ಕ್ಷೇತ್ರದಲ್ಲಿನ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಿಲ್ಲ. ಪದೇಪದೆ ಅಧಿಕಾರಿಗಳು ಬದಲಾದರೆ, ಸಮಸ್ಯೆಗೆ ಪರಿಹಾರ ಯಾವಾಗ ಸಿಗಲಿದೆ?. ಬೇಸಿಗೆಯೊಳಗೆ ಕುಡಿವ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು ಎಂದರು. ಪ್ರತಿಕ್ರಿಯಿಸಿದ ಜಿಪಂ ಉಪವಿಭಾಗ ಎಇಇ ಬಸವರಾಜ ಪಲ್ಲೇದ್, ಕೆರೆಯಲ್ಲಿ ನೀರು ನಿಲ್ಲುತ್ತಿಲ್ಲ. ಬೋರ್‌ವೆಲ್ ಹಾಕಿ ಸರಿಪಡಿಸಬೇಕಿದೆ. ಎರಡು ತಿಂಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.

ಜವಳಗೇರಾದಲ್ಲೂ ಕುಡಿವ ನೀರಿನ ಸಮಸ್ಯೆ ಇರುವ ಬಗ್ಗೆ ಸದಸ್ಯರು ಸಭೆಯ ಗಮನಕ್ಕೆ ತಂದರು. ಬಹು ಗ್ರಾಮ ಯೋಜನೆಯಡಿ ಕೆರೆಯಿಂದ ನೀರು ಪೂರೈಕೆ ಮಾಡುವ ಬಗ್ಗೆ ಎಇಇ ತಿಳಿಸಿದರು. ಬಿಇಒ ಜಿಎಂ ವೃಷಿಬೇಂದ್ರಯ್ಯ ಮಾತನಾಡಿ, ಗಾಂಧಿನಗರ ಸೇರಿ ಮೂರು ಕಡೆಗಳಲ್ಲಿ ಶಾಲಾ ಕಟ್ಟಡಕ್ಕೆ ಜಮೀನು ಸಮಸ್ಯೆ ಉಂಟಾಗಿದೆ. ಅನುದಾನಕ್ಕೆ ಕೊರತೆಯಿಲ್ಲ. 2019ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಉಪಾಧ್ಯಕ್ಷೆ ಕೆರೆ ಹನುಮಮ್ಮ. ಸದಸ್ಯ ಈಶಪ್ಪ ದೇಸಾಯಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.

 

ಚರ್ಚೆಗಿಲ್ಲ ಅವಕಾಶ: ಬೇಸಿಗೆಯಲ್ಲಿ ಕುಡಿವ ನೀರಿಗೆ ಸಂಬಂಧಿಸಿದಂತೆ ವಿಶೇಷ ಚರ್ಚೆ ನಡೆಸಬೇಕಾದ ಸದಸ್ಯರು ಪದೇಪದೆ ಉಪಯೋಗಕ್ಕೆ ಬಾರದ ವಿಷಯಗಳನ್ನೇ ಮುಖ್ಯವಾಗಿಟ್ಟುಕೊಂಡು ಚರ್ಚೆಯಲ್ಲಿ ಕಾಲಹರಣ ಮಾಡಿದರು. ಇದರಿಂದ ಕುಡಿವ ನೀರಿನ ಚರ್ಚೆ ಸಮರ್ಪಕವಾಗಿ ಆಗಲಿಲ್ಲ. ತಾಪಂ ಇಒ ಕೂಡ ಈ ಬಗ್ಗೆ ಹೆಚ್ಚಿನ ಗಮನಹರಿಸಲಿಲ್ಲ.