ಬೀದಿಬದಿ ವ್ಯಾಪಾರಿಗಳ ತೆರವು ಕಾರ್ಯ ಕೈಬಿಡಿ

ಸಿಂಧನೂರು: ಬೀದಿಬದಿ ವ್ಯಾಪಾರಿಗಳ ಮೇಲಿನ ಪೊಲೀಸ್ ಕಿರುಕುಳ ನಿಲ್ಲಿಸಿ, ತೆರವು ಕಾರ್ಯ ಕೈಬಿಡಬೇಕೆಂದು ಒತ್ತಾಯಿಸಿ ನಗರಸಭೆ ಪೌರಾಯುಕ್ತರಿಗೆ ಬೀದಿಬದಿ ವ್ಯಾಪಾರಿಗಳ ಸಂಘ ಬುಧವಾರ ಮನವಿ ಸಲ್ಲಿಸಿತು.

ಜ.5ರಂದು ಸಿಎಂ ನಗರಕ್ಕೆ ಆಗಮಿಸುವ ಮುನ್ನ ಡಿಸೆಂಬರ್ ಕೊನೇ ವಾರ ಕೋರ್ಟ್, ತಹಸಿಲ್ ಕಚೇರಿ, ತಾಪಂ ಮುಂದೆ ಬೀದಿ ಬದಿ ವ್ಯಾಪಾರ ಮಾಡುತ್ತಿರುವವರ ಮೇಲೆ ಪೊಲೀಸರು ಕಿರುಕುಳ ನೀಡಿ ತೆರವುಗೊಳಿಸಿದ್ದರು. ಈ ಕುರಿತು ಸಚಿವರ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಅಳಲು ತೊಡಿಕೊಂಡರು.

ಕೂಡಲೇ ಬೀದಿಬದಿ ವ್ಯಾಪಾರಿಗಳ ಮೇಲಿನ ಪೊಲೀಸರು ದೌರ್ಜನ್ಯ ನಿಲ್ಲಿಸಬೇಕು. ಬೀದಿಬದಿ ವ್ಯಾಪಾರಸ್ಥರನ್ನು ತೆರವುಗೊಳಿಸದೆ ಬದುಕಲು ಬಿಡಬೇಕು. ನಗರದಲ್ಲಿ ದೊಡ್ಡ ಅಂಗಡಿ ವ್ಯಾಪಾರಿಗಳು ಆಕ್ರಮಿಸಿಕೊಂಡ ಫುಟ್‌ಪಾತ್ ಸ್ಥಳವನ್ನು ತೆರವುಗೊಳಿಸಿ, ಪಾದಾಚಾರಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಎಂ.ಗಂಗಾಧರ, ಉಪಾಧ್ಯಕ್ಷ ದುರುಗಪ್ಪ ಭಜಂತ್ರಿ, ಮಂಜುನಾಥ ಗುಮ್ಮ, ರವಿ, ನವರಾಮ್, ಎಚ್.ರಡ್ಡೆಪ್ಪ, ಶರಣಪ್ಪ ಇತರರಿದ್ದರು.