ಸಿಂಧನೂರು: ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಶ್ರಯ ಪಡೆದಿದ್ದ ಕನಕದುರ್ಗಮ್ಮ(81) ಸೋಮವಾರ ನಿಧನರಾಗಿದ್ದು, ರಿಮ್ಸ್ ಮೆಡಿಕಲ್ ಕಾಲೇಜಿಗೆ ನೇತ್ರದಾನದೊಂದಿಗೆ ವಿದ್ಯಾರ್ಥಿಗಳ ಅಧ್ಯಯನಕ್ಕಾಗಿ ಮೃತದೇಹ ಹಸ್ತಾಂತರಿಸಲಾಯಿತು.
ಮೊದಲೇ ನೋಂದಾಯಿಸಿದ್ದ ಹಿನ್ನೆಲೆಯಲ್ಲಿ ರಿಮ್ಸ್ ಕಾಲೇಜಿನ ನೇತ್ರ ವಿಭಾಗದ ವೈದ್ಯರು, ನ್ಯೂಕ್ಲಿಯೇಷನ್ ಮೂಲಕ ಆಶ್ರಮದಲ್ಲಿಯೇ ಕನಕದುರ್ಗಮ್ಮ ಅವರ ನೇತ್ರಗಳನ್ನು ಪಡೆದರು.
ನಂತರ ರಿಮ್ಸ್ ಮೆಡಿಕಲ್ ಕಾಲೇಜಿಗೆ ದೇಹವನ್ನು ಹಸ್ತಾಂತರಿಸಲಾಯಿತು. ಈ ವೇಳೆ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ನಾಗರಾಜ ಕಾಟ್ವಾ ಮಾತನಾಡಿ, ಕಾರುಣ್ಯ ಆಶ್ರಮದಲ್ಲಿ ಕೊನೆಯುಸಿರೆಳೆದ ಕನಕದುರ್ಗಮ್ಮ ಅವರು ನೇತ್ರದಾನ, ದೇಹದಾನ ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ. ಅನಾಥರಿಗೆ ಆಶ್ರಯ ನೀಡಿ ನೇತ್ರ, ದೇಹದಾನದ ಜಾಗೃತಿ ಮೂಡಿಸುತ್ತಿರುವ ಕಾರುಣ್ಯ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದರು.
ಆಶ್ರಮದ ಕಾರ್ಯಾಧ್ಯಕ್ಷ ಡಾ. ಚನ್ನಬಸಯ್ಯಸ್ವಾಮಿ ಹಿರೇಮಠ, ರಿಮ್ಸ್ ಮೆಡಿಕಲ್ ಕಾಲೇಜಿನ ನೇತ್ರ ವಿಭಾಗದ ವೈದ್ಯರಾದ ನೀರಜ್, ನಿಶಾ, ಸುಶಾಂತ್, ಸಿಬ್ಬಂದಿ ಆಕಾಶ, ಅಂಗರಚನಾಶಾಸ್ತ್ರ ವಿಭಾಗದ ಸಿಬ್ಬಂದಿ ಸುರೇಶ, ಮತಿನ್, ನಗರ ಪೊಲೀಸ್ ಠಾಣೆ ಅಧಿಕಾರಿ ಆನಂದಕುಮಾರ, ಆಶ್ರಮದ ಸುಜಾತಾ ಹಿರೇಮಠ, ಸುಜಾತಾ ಮಲದಗುಡ್ಡ, ಸಿದ್ದಯ್ಯಸ್ವಾಮಿ, ಮರಿಯಪ್ಪ, ಜ್ಯೋತಿ ಇದ್ದರು.