ಉಪಕಸುಬು ಉತ್ತೇಜನೆಗಾಗಿ ಪಶು, ಮೀನು ಮೇಳ

ಸಿಂಧನೂರು: ಕೃಷಿ ಜತೆಗೆ ಉಪಕಸುಬು ಉತ್ತೇಜಿಸುವ ಉದ್ದೇಶದಿಂದ ಜ.5ರಿಂದ 7ರವರೆಗೆ ರಾಜ್ಯ ಮಟ್ಟದ ಪಶು ಹಾಗೂ ಮೀನು ಮೇಳ ಆಯೋಜಿಸಲಾಗಿದೆ ಎಂದು ಪಶುಸಂಗೋಪನೆ, ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಹೇಳಿದರು.

ಕೃಷಿ ಕೈಗೊಂಡು ನಷ್ಟ ಅನುಭವಿಸಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಉಪಕಸುಬು ಹೊಂದಿದ ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳಿಲ್ಲ. ಕೃಷಿ ಜತೆಗೆ ಉಪಕಸುಬು ಇದ್ದರೆ ರೈತರ ಏಳ್ಗೆ ಸಾಧ್ಯವಾಗಲಿದೆ. ಮೀನು, ಕುರಿ, ಕೋಳಿ, ಹಸು ಸಾಕಣೆ ಉಪಕಸುಬು ಹೊಂದಲು ರೈತರ ಬಳಿ ಅಧಿಕಾರಿಗಳು ತೆರಳಿ ಮನವರಿಕೆ ಮಾಡಿಕೊಡಲಿದ್ದಾರೆ. ಪ್ರಕೃತಿ ವಿಕೋಪವಾದಾಗ ಉಪಕಸುಬು ರೈತರ ಕೈಹಿಡಿಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ರೈತರಿಗೆ ವಿವಿಧ ತಳಿಯ ಹಸು, ಕೋಳಿ, ಆಡು, ಟಗರು ಸೇರಿ ಇತರ ಪ್ರಾಣಿ ಪರಿಚಯ ಮಾಡಿಕೊಡಲಾಗುವುದು. ನಾರಿ ಸುವರ್ಣ ಟಗರನ್ನು 20 ಕುರಿ ಹೊಂದಿದ ರೈತರಿಗೆ ಸಿಎಂ ವಿತರಿಸುವರು. 5 ಸಾವಿರ ರೂ. ರೈತರು ನೀಡಿದರೆ, 15 ಸಾವಿರ ರೂ. ಸರ್ಕಾರದಿಂದ ನೀಡಲಾಗುವುದು. 150 ಪಶುಮೇಳ ಮಳಿಗೆ ಹಾಗೂ 25 ಮೀನು ಮಳಿಗೆ ಹಾಕಲಾಗುವುದು ಎಂದು ತಿಳಿಸಿದರು.

ಕುರಿ, ಕೋಳಿ, ಹಂದಿ, ಹೈನುಗಾರಿಕೆ, ಮೀನು ಸಾಕಣೆ ಸೇರಿ ವಿವಿಧ ಉಪಕಸುಬುಗಳ ಬಗ್ಗೆ ಮೇಳದಲ್ಲಿ ಮಾಹಿತಿ ನೀಡಲಾಗುವುದು. ಜತೆಗೆ ಹಾಲು ಕರೆಯುವ ಸ್ಪರ್ಧೆ, ಡಾಗ್ ಶೋ ಏರ್ಪಡಿಸಲಾಗಿದೆ. ಉತ್ತಮ ರಾಸುಗಳಿಗೆ ಪ್ರಶಸ್ತಿ ನೀಡಲಾಗುವುದು. ಮೊದಲ ಬಹುಮಾನ 50 ಸಾವಿರ, ಎರಡನೇ ಬಹುಮಾನ 30 ಸಾವಿರ, ಮೂರನೆ ಬಹುಮಾನ 20 ಸಾವಿರ ಹಾಗೂ ಸಮಾಧಾನಕರ ಬಹುಮಾನ 10 ಸಾವಿರ ರೂ. ನೀಡಲಾಗುವುದು.
| ವೆಂಕಟರಾವ್ ನಾಡಗೌಡ
ಪಶುಸಂಗೋಪನೆ, ಮೀನುಗಾರಿಕೆ ಸಚಿವ

ಕಾಮಗಾರಿ ಮಾಹಿತಿ ನೀಡಲು ಸೂಚನೆ

ಸಿಂಧನೂರು: ಹಳೇ ಕಾಮಗಾರಿಗಳ ಜತೆಗೆ ಹೊಸದಾಗಿ ಮಂಜೂರಾದ ಕಾಮಗಾರಿಗಳ ಮಾಹಿತಿ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಸೂಚಿಸಿದರು.

ಜ.5ರಂದು ಸಿಎಂ ಕುಮಾರಸ್ವಾಮಿ ಆಗಮನ ಹಿನ್ನೆಲೆಯಲ್ಲಿ ನಗರದ ಸರ್ಕಿಟ್‌ಹೌಸ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ವಿವಿಧ ಇಲಾಖೆ ವ್ಯಾಪ್ತಿಯ ಕಾಮಗಾರಿಗಳನ್ನು ನೀಡಲಾಗಿತ್ತು. ಈಗ ಒಂದು ತಿಂಗಳಲ್ಲಿ ಮತ್ತಷ್ಟು ಕಾಮಗಾರಿಗಳ ಮಂಜೂರು ಪಡೆಯಲಾಗಿದೆ. ಈ ಕುರಿತು ಮಾಹಿತಿ ಒದಗಿಸಬೇಕು. ಉದ್ಘಾಟನೆ ಹಾಗೂ ಶಂಕುಸ್ಥಾಪನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸಿದ್ಧತೆ ನಡೆಸಬೇಕು ಎಂದು ಸೂಚಿಸಿದರು.

ಪಿಡಬ್ಲ್ಯುಡಿ ಇಲಾಖೆ ಎಇ ಹೊಸದಾಗಿ ಮಂಜೂರಾದ ಕಾಮಗಾರಿ ಮಾಹಿತಿ ನೀಡಲು ಹಿಂಜರಿಯುತ್ತಿದ್ದಂತೆ, ನಾನು ಹೇಳಿ ವಾರ ಕಳೆದಿದೆ. ಕಾಮಗಾರಿ ಮಂಜೂರಾತಿಯನ್ನು ಲೋಕೋಪಯೋಗಿ ಇಲಾಖೆ ಸಚಿವರಿಂದ ಪಡೆದಿಲ್ಲವೆಂದರೆ ಏನರ್ಥ. ಈ ಹುದ್ದೆಯಲ್ಲಿ ಕೆಲಸ ಮಾಡಲು ಯೋಗ್ಯರಿಲ್ಲ ಎಂದು ತರಾಟೆ ತೆಗೆದುಕೊಂಡರು.

ಜ.5ರಿಂದ 7ವರೆಗೆ ನಡೆಯಲಿರುವ ಪಶುಮೇಳದ ಬಗ್ಗೆ ಮಾಹಿತಿ ನೀಡಿದ ಪಶು ಇಲಾಖೆ ಕಮಿಷನರ್ ಯು.ಪಿ.ಸಿಂಗ್, ಪ್ರತಿವರ್ಷ ರಾಜ್ಯ ಮಟ್ಟದ ಪಶುಮೇಳ ನಡೆಸಲಾಗುತ್ತದೆ. ಪಶುಮೇಳದಲ್ಲಿ ದಕ್ಷಿಣ ಕನ್ನಡದ ಕಂಬಳ ಕೋಣ, ಚಿಕ್ಕಮಂಗಳೂರು ಸೇರಿ ರಾಜ್ಯ ಹಾಗೂ ಇತರ ರಾಜ್ಯದ ವಿವಿಧ ತಳಿಯ ಪಶುಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ಐದು ತಳಿಗಳು ಪಾಲನೆಗೆ ಯೋಗ್ಯವಾಗಿವೆ. 9 ಕುರಿ ತಳಿ, 8 ಮೇಕೆ ತಳಿ, 3 ಬಾತಕೋಳಿ ತಳಿ, ನಾಟಿಕೋಳಿ ಹಾಗೂ ನಾರಿ ಸುವರ್ಣ ತಳಿ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.

ಜ.6ರಂದು ಸಂಜೆ ಹಾಸ್ಯ ಕಲಾವಿದ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ. ಉಪಕಸುಬು ಹೊಂದಿದ ಪ್ರಗತಿಪರ ರೈತರನ್ನು ಸನ್ಮಾನಿಸಲಾಗುವುದು. ಇಲಾಖೆಗೆ ಸಂಬಂಧಿಸಿದ ಮಾಹಿತಿಗಳನ್ನು ಒದಗಿಸಲಾಗುವುದು. ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಂಡು ಬಹುಮಾನ ನಿಗದಿ ಮಾಡಲಾಗಿದೆ ಎಂದು ವಿವರಿಸಿದರು.

ಸಚಿವ ನಾಡಗೌಡ ಮಾತನಾಡಿ, ಪಶುಮೇಳ, ಮೀನು ಮೇಳ ಜತೆಗೆ ತಾಲೂಕಿನ ವಿವಿಧ ಇಲಾಖೆ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ನಡೆಯಲಿದೆ. ಪಶುಮೇಳಕ್ಕೆ ಹಾಗೂ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗಾಗಿ 2 ವೇದಿಕೆ ಸಿದ್ಧಪಡಿಸಲಾಗಿದೆ. ಅಧಿಕಾರಿಗಳು ಪ್ರಾಮಾಣಿಕ ಕೆಲಸ ಮಾಡಿ ಯಶಸ್ವಿಗೊಳಿಸಬೇಕು ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಬಿ.ಶರತ್, ಎಸ್ಪಿ ಕಿಶೋರ್‌ಬಾಬು, ಹೆಚ್ಚುವರಿ ಡಿಸಿ ಗೋವಿಂದರೆಡ್ಡಿ ಹಾಗೂ ಅಧಿಕಾರಿಗಳು ಇದ್ದರು.