ರಾಯಚೂರಿಗೆ ರೈಲು ಓಡಿಸುವೆ – ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಭರವಸೆ

ಸಿಂಧನೂರು: ಪ್ರಧಾನಿ ನರೇಂದ್ರಮೋದಿಯವರು ದೇಶದ ಜನರು ಸ್ವಾಭಿಮಾನದಿಂದ ತಲೆಯೆತ್ತುವ ವಾತಾವರಣ ಸೃಷ್ಟಿ ಮಾಡಿದ್ದಾರೆ ಎಂದು ಕೊಪ್ಪಳ ಲೋಕಸಭೆ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿ ಹೇಳಿದರು.

ನಗರದ ಕುಷ್ಟಗಿ ರಸ್ತೆಯಲ್ಲಿ ಬಿಜೆಪಿ ಚುನಾವಣಾ ಪ್ರಚಾರಕ್ಕೆ ಕಚೇರಿಯನ್ನು ಶನಿವಾರ ಸಂಜೆ ಉದ್ಘಾಟಿಸಿ ಮಾತನಾಡಿದರು. ಹಿಂದೆ ವಿದೇಶಕ್ಕೆ ದೇಶದ ಪ್ರಧಾನಿ ಹೋದರೆ ಸಾಲ ಕೇಳಲು ಬರುತ್ತಾರೆಂದು ಅಸಡ್ಡೆಯಿಂದ ಕಾಣುತ್ತಿದ್ದರು. ಈಗ ವಿದೇಶಿಯರು ದೇಶದ ಪ್ರಧಾನಿಯನ್ನು ಅಭಿಮಾನದಿಂದ ಸ್ವಾಗತಿಸುತ್ತಾರೆ ಎಂದರು.

ದೇಶದಲ್ಲಿ ಶೇ.70 ಜನ ಮತ್ತೊಮ್ಮೆ ಮೋದಿಯೇ ಪ್ರಧಾನಿ ಆಗಲಿ ಎನ್ನುತ್ತಾರೆ. ಮೋದಿ ಅವರ ಜನ್ರಪ್ರಿಯ ಯೋಜನೆಗಳೇ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿವೆ. ಆಡಳಿತಾವಧಿಯಲ್ಲಿ ಗಿಣಿಗೇರಾ-ರಾಯಚೂರು ಮುಖ್ಯರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಎಲ್ಲ ಪ್ರಯತ್ನಗಳನ್ನು ಮಾಡಿದ್ದು, ಈ ಬಾರಿ ಆಯ್ಕೆಯಾದರೆ ಚತುಷ್ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಮುನಿರಾಬಾದ್-ಮಹಿಬೂಬ್ ನಗರ ರೈಲ್ವೆ ಮಾರ್ಗ 20 ವರ್ಷಗಳಿಂದ ನನೆಗುದಿಗೆ ಬಿದ್ದಿತ್ತು. ಅಭಿವೃದ್ದಿ ಕಾಮಗಾರಿ ಪೂರ್ಣಗೊಳಿಸಿ ಗಂಗಾವತಿಯಿಂದ ರೈಲು ಸಂಚಾರಕ್ಕೆ ಚಾಲನೆ ನೀಡಲಾಗಿದೆ. ಅದರಂತೆ ಈಗಾಗಲೇ ಸಿಂಧನೂರು ತಾಲೂಕಿನವರೆಗೆ ರೈಲ್ವೆ ಮಾರ್ಗ ಪ್ರಗತಿಯಲ್ಲಿದ್ದು, ಈ ಬಾರಿ ಆಯ್ಕೆಯಾದರೆ ರಾಯಚೂರುವರೆಗೆ ರೈಲು ಓಡಿಸಲಾಗವುದು ಎಂದು ಭರವಸೆ ನೀಡಿದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಅಮರೇಗೌಡ ವಿರೂಪಾಪುರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಯೋಜನೆಗಳು ಮತ್ತು ಸಂಗಣ್ಣ ಕರಡಿ ಲೋಕಸಭೆ ಸದಸ್ಯರಾಗಿ ಮಾಡಿದ ಅಭಿವೃದ್ಧಿ ಕಾಮಗಾರಿಗಳ ಮಾಹಿತಿ ನೀಡಿದರು. ಬಿಜೆಪಿ ಮುಖಂಡ ಆರ್.ಬಸನಗೌಡ ಮಾತನಾಡಿದರು.

ಮುಖಂಡರಾದ ಪರಮೇಶಪ್ಪ ದಢೇಸುಗೂರು, ವೆಂಕನಗೌಡ ಮಲ್ಕಾಪುರ, ಯಾಪಲಪರ್ವಿ ದೇವೇಂದ್ರಪ್ಪ, ತಿಮ್ಮನಗೌಡ ಗುಡದೂರು, ರಘ ಬಾಂಡಗೆ, ಗಿರಿಗೌಡ ಗಂಗಾವತಿ, ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ವಿರೂಪಾಕ್ಷಪ್ಪ, ರೈತ ಮೋರ್ಚಾ ಅಧ್ಯಕ್ಷ ಶರಣೇಗೌಡ, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ, ಪ್ರೇಮಾ ಸಿದ್ದಾಂತಿಮಠ, ವೀರೇಶ, ನಾಗರಾಜ, ಎಚ್.ವೀರಭದ್ರಪ್ಪ ವಕೀಲ, ಎನ್.ರಾಮನಗೌಡ ವಕೀಲ, ನಂದಿನಿ ಇದ್ದರು. ಜಡಿಯಪ್ಪ ವಕೀಲ ನಿರೂಪಿಸಿದರು.