ಮನದ ಮೈಲಿಗೆ ಸ್ವಚ್ಛಗೊಳಿಸುವ ಅಧ್ಯಾತ್ಮ ಪ್ರವಚನ

ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿದ್ಧಲಿಂಗಶ್ರೀ ಅಭಿಪ್ರಾಯ

ಸಿಂಧನೂರು (ರಾಯಚೂರು): ಮಂಡೆ ಮತ್ತು ಬಟ್ಟೆಗಳು ಮೈಲಿಗೆ ಆದರೆ, ಸ್ವಚ್ಛವಾಗಿ ತೊಳೆದುಕೊಳ್ಳಬಹುದು. ಆದರೆ ಮನದ ಮೈಲಿಗೆಯಾದರೆ ತೊಳೆದುಕೊಳ್ಳಲು ಆಗುವುದಿಲ್ಲ. ಅದು ಆಧ್ಯಾತ್ಮಿಕ ಪ್ರವಚನದಿಂದ ಮಾತ್ರ ಸ್ವಚ್ಛವಾಗುತ್ತದೆ ಎಂದು ವಳ್ಳಬಳ್ಳಾರಿ ಸುವರ್ಣಗಿರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ನಗರದ ತಾಲೂಕು ಕ್ರೀಡಾಂಗಣದಲ್ಲಿ ತಿಂಗಳ ಕಾಲ ಹಮ್ಮಿಕೊಂಡಿರುವ ಶ್ರೀಸಿದ್ಧೇಶ್ವರ ಸ್ವಾಮೀಜಿಗಳ ಆಧ್ಯಾತ್ಮಿಕ ಪ್ರವಚನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು. ಬಹುದಿನದ ಬಯಕೆ ಸಂಕ್ರಮಣದ ದಿನದಂದು ಈಡೇರಿದೆ. ಸಿದ್ಧೇಶ್ವರ ಸ್ವಾಮಿಗಳ ಪ್ರವಚನ ಕೇಳುವುದು ಜ್ಞಾನದ ಯೋಗವಾಗಿದೆ. ಪ್ರವಚನದಿಂದ ಶ್ರವಣವು ಶುದ್ಧವಾಗಲಿದೆ. ಬದುಕಿನ ನಿಜ ಅರ್ಥವನ್ನು ತಿಳಿಯಬಹುದಾಗಿದೆ. ಸಿದ್ಧೇಶ್ವರ ಸ್ವಾಮಿಗಳ ಮಾತುಗಳಲ್ಲೇ ಸುಂದರ ಬದುಕಿನ ಮೂಲಮಂತ್ರ ಅಡಗಿದೆ. ಎಲ್ಲರೂ ಪ್ರವಚನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಮೂರುಮೈಲ್ ಕ್ಯಾಂಪಿನ ರಂಭಾಪುರಿ ಖಾಸಾಶಾಖಾ ಮಠದ ಸೋಮನಾಥ ಶಿವಾಚಾರ್ಯ ಮಾತನಾಡಿ, ಸಿಂಧನೂರು ತಾಲೂಕಿನಲ್ಲಿ ರೈತರು, ಕಾರ್ಮಿಕರು, ಶ್ರಮಿಕರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರೆಲ್ಲ ಆಧ್ಯಾತ್ಮಿಕ ಜೀವಿಗಳಾಗಿದ್ದಾರೆ. ಸಿದ್ಧೇಶ್ವರ ಸ್ವಾಮೀಜಿಯವರ ಪ್ರವಚನದಲ್ಲಿ ನುಡಿಯುವ ತತ್ವಗಳನ್ನು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡು ಅನುಷ್ಠಾನಕ್ಕೆ ತರಬೇಕು ಎಂದರು.

ಚರ್ಚ್ ಫಾದರ್ ರೆವರೆಂಡ್ ಶ್ಯಾಮಿಯಲ್ ಮಾತನಾಡಿ, ಇಂದಿನ ಜೀವನ ಜಂಜಾಟಕ್ಕೆ ಸಿಲುಕಿದ್ದು ಮನಸ್ಸಿಗೆ ನೆಮ್ಮದಿ, ಶಾಂತಿ ಇಲ್ಲದಂತಾಗಿದೆ. ಮನಸ್ಸು ಶುದ್ಧ್ದಗೊಳಿಸುವ ಪ್ರವಚನ ಅಗತ್ಯವಾಗಿದೆ. ಪ್ರವಚನದ ಮಾತುಗಳನ್ನು ಆಲಿಸಿ, ಐಕ್ಯತೆ ಸಾಧಿಸಬೇಕು ಎಂದರು.

ತುರ್ವಿಹಾಳ ಚಿದಾನಂದಯ್ಯ ಗುರುವಿನ್ ಮಾತನಾಡಿದರು. ರೌಡಕುಂದ ಮರಿಸಿದ್ಧಲಿಂಗ ಸ್ವಾಮೀಜಿ, ಮೌಲನಾ ಅಬ್ದುಲ್‌ಖಾಸ್ಮಿ ಮಾತನಾಡಿದರು. ಯದ್ದಲದೊಡ್ಡಿ ಮಹಾಲಿಂಗ ಸ್ವಾಮೀಜಿ, ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ವರರುದ್ರಮುನಿ ಸ್ವಾಮೀಜಿ ಗಚ್ಚಿನಮಠ, ಅಮರಗುಂಡಯ್ಯಸ್ವಾಮಿ, ನಂಜುಂಡಯ್ಯ ಗುರುವಿನ್, ಗುಂಡಯ್ಯಸ್ವಾಮಿ ಇದ್ದರು.

ವೇದಿಕೆ ಪಕ್ಕ ಕುಳಿತ ಸಿದ್ಧೇಶ್ವರ ಸ್ವಾಮೀಜಿ
ಸಿಂಧನೂರಲ್ಲಿ ತಿಂಗಳ ಪರ್ಯಂತ ನಡೆಯಲಿರುವ ಸಿದ್ಧೇಶ್ವರ ಸ್ವಾಮೀಜಿ ಅವರ ಪ್ರವಚನ ಕಾರ್ಯಕ್ರಮ ಉದ್ಘಾಟನೆ ಸಮಾರಂಭದ ವೇದಿಕೆ ಮೇಲೆ ವಿವಿಧ ಸ್ವಾಮೀಜಿಗಳು ಆಸನರಾಗಿದ್ದರು. ಆದರೆ, ಪ್ರವಚನದ ಕೇಂದ್ರಬಿಂದು ಸಿದ್ಧೇಶ್ವರ ಸ್ವಾಮೀಜಿ ಮಾತ್ರ ವೇದಿಕೆ ಪಕ್ಕದಲ್ಲಿ ಮೌನವಾಗಿ ಕುಳಿತೆ ಕಾರ್ಯಕ್ರಮ ವೀಕ್ಷಿಸಿದರು. ನೆರೆದ ಜನರಿಗೆ ಇದು ಆಶ್ಚರ್ಯ ಉಂಟು ಮಾಡಿತು. ಮಂಗಳವಾರ ಬೆಳಗ್ಗೆ 6.30 ರಿಂದ 7.30 ವರೆಗೆ ಪ್ರವಚನ ನಡೆಸಿಕೊಡಲಿದ್ದಾರೆ.

ಧರ್ಮಗಳ ಪಾಲನೆಗೆ ಪ್ರವಚನ ಅಗತ್ಯವಾಗಿದೆ. ಯಾವ ಧರ್ಮ ಎನ್ನುವ ಪ್ರಶ್ನೆಗೆ ಪ್ರವಚನದಲ್ಲೇ ಅರ್ಥ ಸಿಗಲಿದೆ. ಮನೆಗೆ ಹಚ್ಚಿದ ಬೆಂಕಿ ನೀರಿನಿಂದ ಆರಿಸಬಹುದು. ಮನಸ್ಸಿಗೆ ಹಚ್ಚಿದ ಬೆಂಕಿಯನ್ನು ಪ್ರವಚನದಿಂದ ಆರಿಸಿಕೊಳ್ಳಬಹುದಾಗಿದೆ.
|ತುರ್ವಿಹಾಳ ಚಿದಾನಂದಯ್ಯ ಗುರುವಿನ್

Leave a Reply

Your email address will not be published. Required fields are marked *