ಶಾಸಕರಿಂದ ಅಭಿವೃದ್ಧಿ ಕಡೆಗಣನೆ

ರೈತ ಸಂಘ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಆರೋಪ | ವೈಜ್ಞಾನಿಕ ಬೆಲೆಗಾಗಿ ಫೆ.1ರಂದು ಹೋರಾಟ

ಸಿಂಧನೂರು: ಬರಕ್ಕೆ ತುತ್ತಾಗಿ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂಥ ವೇಳೆ ಶಾಸಕರು ಹೈಟೆಕ್ ರೆಸಾರ್ಟ್‌ಗಳಲ್ಲಿ ಮೋಜು-ಮಸ್ತಿ ಮಾಡುವ ಮೂಲಕ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂದು ಕರ್ನಾಟಕ ರೈತ ಸಂಘ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ ಆರೋಪಿಸಿದ್ದಾರೆ.

ಏಳು ತಿಂಗಳಲ್ಲಿ 485 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನರ ಕಷ್ಟಗಳಿಗೆ ಸ್ಪಂದಿಸದ ಶಾಸಕರು ರೆಸಾರ್ಟ್ ರಾಜಕೀಯ ನಡೆಸಿದ್ದಾರೆ. ಗುರಗ್ರಾಮದ ಹೈಟೆಕ್ ರೆಸಾರ್ಟ್‌ನಲ್ಲಿ ನಾಲ್ಕಾರು ದಿನ ಬಿಜೆಪಿ ಶಾಸಕರು ಮೋಜು-ಮಸ್ತಿ ಮಾಡಿದ್ದಾರೆ. ಕರ್ತವ್ಯ ಮರೆತು ಜನರ ತೆರಿಗೆ ಹಣದಲ್ಲಿ ಮಜಾ ಮಾಡುತ್ತಿರುವುದು ಜನದ್ರೋಹಿ ನೀತಿ ಆಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಜನರಿಗೆ ಉದ್ಯೋಗ ನೀಡಲು, ಭತ್ತ, ತೊಗರಿ, ಕಡಲೆ, ಜೋಳಕ್ಕೆ ವೈಜ್ಞಾನಿಕ ಬೆಲೆ, ಭೂ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಫೆ.1ರಂದು ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೋರಾಟ ನಡೆಸಲಾಗುತ್ತದೆ. ನಿರುದ್ಯೋಗ ಮತ್ತು ಬಡತನದಿಂದ ಗುಳೆ ಪ್ರಮಾಣ ಹೆಚ್ಚಿದೆ. ಆದರೂ, ಜನರ ಸಂಕಷ್ಟಗಳ ಕುರಿತು ಜಿಲ್ಲಾ ಉಸ್ತುವಾರಿ ಮಂತ್ರಿ ಮಾತನಾಡುತ್ತಿಲ್ಲ. 1 ಕ್ವಿಂಟಾಲ್ ಅಕ್ಕಿ ಬೆಲೆ 5 ಸಾವಿರ ರೂ.ಇದೆ. ಆದರೆ, ಭತ್ತ ಕೇವಲ 1300 ರಿಂದ 1400 ರೂ.ಗೆ ಖರೀದಿಸಲಾಗುತ್ತಿದೆ ಎಂದರು.

ಸಿಂಧನೂರಿನಲ್ಲಿ ಪಶುಮೇಳ ನಡೆಸಿದ್ದು ಸ್ವಾಗತ. ಆದರೆ, ರಾಜ್ಯದಲ್ಲಿ ಲಕ್ಷಾಂತರ ಜಾನುವಾರುಗಳಿಗೆ ಮೇವಿಲ್ಲದ ಕಾರಣ ರೈತರೇ ಕಸಾಯಿಖಾನೆಗಳಿಗೆ ಸಾಗಿಸುತ್ತಿದ್ದಾರೆ. ಪಶುಸಂಗೋಪನಾ ಸಚಿವರು ದನಕರುಗಳನ್ನು ಉಳಿಸಲು ಮುಂದಾಗಬೇಕು.ರಾಜ್ಯದ ಅನೇಕ ಕಡೆ ಮೇವಿನ ಬ್ಯಾಂಕ್ ತೆರೆಯಲಾಗಿದೆ. ಇಲ್ಲಿ ರೈತರು ಹಣಕೊಟ್ಟು ಮೇವು ಖರೀದಿಸಲು ನಿಬಂಧನೆ ವಿಧಿಸಲಾಗಿದೆ, ಇದು ಸರಿಯಲ್ಲ. ಎಲ್ಲ ಮೇವು ಬ್ಯಾಂಕ್‌ಗಳಲ್ಲಿ ರೈತರಿಗೆ ಉಚಿತ ಮೇವು ನೀಡಬೇಕು ಎಂದು ಒತ್ತಾಯಿಸಿದರು. ಡಿ.ಎಸ್.ನಿರ್ವಾಣಪ್ಪ, ರಮೇಶ ಪಾಟೀಲ್ ಬಸವರಾಜ ಬೆಳಗುರ್ಕಿ, ಬಿ.ಎನ್.ಯರದಿಹಾಳ ಇದ್ದರು.