ಸಚಿವ ಸ್ಥಾನಕ್ಕಾಗಿ ಕಿತ್ತಾಟ, ಬರ ನಿರ್ವಹಣೆಗಿಲ್ಲ ಕಾಳಜಿ

ಸಿಂಧನೂರು (ರಾಯಚೂರು): ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನಕ್ಕಾಗಿ ಕಿತ್ತಾಟ ನಡೆದಿದೆ. ಆದರೆ, ರಾಜ್ಯದ ಬರ ನಿರ್ವಹಣೆಗೆ ಕಾಳಜಿ ವಹಿಸುತ್ತಿಲ್ಲ. ಅಭಿವೃದ್ಧಿ ಮರೆತಿರುವ ಸರ್ಕಾರಕ್ಕೆ ಎಚ್ಚರಿಸುವ ಕೆಲಸವಾಗಬೇಕಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಗಾಲ ಆವರಿಸಿರುವ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲಾಗಿದೆ. ಆದರೆ ಸಿಎಂ ಮಾತ್ರ ಎಲ್ಲೂ ಬರಗಾಲವಿಲ್ಲ. ಮೇವು, ನೀರಿಗೆ ಕೊರತೆಯಿಲ್ಲವೆಂದು ಕಥೆ ಕಟ್ಟಿದ್ದಾರೆ. ಸಚಿವ ಸಂಪುಟ ಹಂಚಿಕೆಯಿಂದ ಕಾಂಗ್ರೆಸ್‌ನಲ್ಲಿ ಬೇಗುದಿ ಆರಂಭವಾಗಿದೆ. ಇದೇ ಚರ್ಚೆಯಲ್ಲಿ ಕಾಲಹರಣ ನಡೆದಿದೆ. ಸಮ್ಮಿಶ್ರ ಸರ್ಕಾರದಿಂದ ರಾಜ್ಯದ ಅಭಿವೃದ್ಧಿ ಮಂಕಾಗಿದೆ. ಸಾಲಮನ್ನಾ ವಿಚಾರದಲ್ಲೂ ಗೊಂದಲ ತಂದಿಟ್ಟಿದೆ. ಯಾವ ರೈತರ ಸಾಲಮನ್ನಾ ಆಗಿಲ್ಲ. ರೈತರ ಆತ್ಮಹತ್ಯೆಗಳು ನಿರಂತರ ಸಾಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

ಸ್ಥಳೀಯ ಸಚಿವರು ಹಾಗೂ ಮಾಜಿ ಶಾಸಕರು ತಾಲೂಕು ಅಭಿವೃದ್ಧಿಗೆ ಶ್ರಮಿಸಿಲ್ಲ. ಮಹತ್ವದ 24/7 ಕುಡಿವ ನೀರಿನ ಯೋಜನೆ ಹಾಗೂ ಯುಜಿಡಿ ಕಾಮಗಾರಿಗಳು ಅರೆಬರೆಯಾಗಿರುವುದು ಅವರ ಅಭಿವೃದ್ಧಿಗೆ ಹಿಡಿದ ಕನ್ನಡಿ. ಸ್ಥಳೀಯ ಅಭಿವೃದ್ಧಿಯಲ್ಲಿ ಆಗಿರುವ ಲೋಪ ಖಂಡಿಸಿ, ತಾಲೂಕು ಬಿಜೆಪಿಯಿಂದ ನಿರಂತರ ಹೋರಾಟ ನಡೆಯಲಿದೆ. ಮಾನ್ವಿಯಲ್ಲಿ ಗ್ರಾಮ ಲೆಕ್ಕಾಧಿಕಾರಿಯ ಕೊಲೆ ಪ್ರಕರಣ ತನಿಖೆಗೊಳಪಡಿಸಬೇಕು. ಅಕ್ರಮ ಮರಳು ದಂಧೆ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮವಾಗಬೇಕೆಂದರು.

ಕೊಪ್ಪಳ ಸಂಸದ ಸಂಗಣ್ಣ ಕರಡಿ, ಕನಕಗಿರಿ ಶಾಸಕ ಬಸವರಾಜ ದಢೇಸುಗೂರು, ಬಿಜೆಪಿ ಮುಖಂಡ ಕೊಲ್ಲಾ ಶೇಷಗಿರಿರಾವ್, ಮಾಜಿ ಎಂಎಲ್‌ಸಿ ಎನ್.ಶಂಕ್ರಪ್ಪ, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಪ್ರಮುಖರಾದ ಆರ್.ಬಸನಗೌಡ ತುರ್ವಿಹಾಳ, ವೆಂಕನಗೌಡ ಮಲ್ಕಾಪುರ, ದೇವೇಂದ್ರಪ್ಪ ಯಾಪಲಪರ್ವಿ, ಮಲ್ಲಿಕಾರ್ಜುನ ಕಂಟ್ರೂಲರ್, ಮಧ್ವರಾಜ್ ಆಚಾರ್ಯ, ಅಡಿವೆಪ್ಪ ಓತೂರು, ಬಸವರಾಜ ಸಿಂಧನೂರು ಇದ್ದರು.