ಗಮನ ಸೆಳೆದ ವಿಜ್ಞಾನ ವಸ್ತು ಪ್ರದರ್ಶನ

ಸಿಂಧನೂರು (ರಾಯಚೂರು): ಭೂಮಿಯ ಪರಿಭ್ರಮಣೆ, ಹಗಲು-ರಾತ್ರಿ, ಹುಣ್ಣಿಮೆ-ಅಮಾವಾಸ್ಯೆ, ಗರ್ಭದಲ್ಲಿ ಭ್ರೂಣದ ಬೆಳವಣಿಗೆಯ ಹಂತಗಳು, ಸೌರಗ್ರಹ, ಮಾನವನ ರಚನೆ ಹೀಗೆ ಕೂತುಹಲ ಕೆರಳಿಸುವ ವಿಜ್ಞಾನ ಮಾದರಿಗಳು ಗಮನ ಸೆಳೆದವು.

ನಗರದ ಆರ್‌ಜಿಎಂ ಶಾಲೆಯಲ್ಲಿ ಮಂಗಳವಾರ ಆಯೋಜಿಸಿದ್ದ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು ಸೂರ್ಯಗ್ರಹಣ, ಚಂದ್ರಗ್ರಹಣ, ಪೆಟ್ರೋಲ್ ಇಂಜಿನ್, ನೀರಿನ ಶುದ್ಧೀಕರಣ, ಸರಳ ಸುಲಭ ಶೌಚಗೃಹ (ಕಡಿಮೆ ವೆಚ್ಚದ), ಪರಿಸರ ಮಾಲಿನ್ಯ, ಹಳ್ಳದ ನೀರು ಶುದ್ಧೀಕರಣ, ಸೌರಗೃಹ ಮಾದರಿ, ಗಣಿತದಲ್ಲಿ ತ್ರಿಭುಜ, ವೃತ್ತ, ಸಿಲೆಂಡರ್, ಕೆಂಪುಕೋಟೆ, ಈದ್‌ಮೀರ್, ಚಾರ್‌ಮಿನಾರ್ ಮಾದರಿ, ಕನ್ನಡದ ವೀರಗಾಸೆ, ಕಂಸಾಳೆ, ನೃತ್ಯ, ಕವಿಗಳ ಪರಿಚಯ ಹಾಗೂ ಹಿಂದಿ ಪಠ್ಯಾನುಕ್ರಮದ ಪರಿಚಯ ಮಾದರಿಗಳು ಹಾಗೂ ಕುಶಲ ವಸ್ತುಗಳು ಗಮನ ಸೆಳೆದವು.

ಉದ್ಘಾಟನೆ: ವಸ್ತು ಪ್ರದರ್ಶನ ಕೊಠಡಿಗಳನ್ನು ಶ್ರೀ ಶರಣಬಸವೇಶ್ವರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಆರ್.ಪದ್ಮನಾಭ ಉದ್ಘಾಟಿಸಿದರು. ನಂತರ ಮಾತನಾಡಿ, ವಿದ್ಯಾರ್ಥಿಗಳ ಮಾದರಿಗಳು ಅವರಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸೃಜನಶೀಲತೆ ಹೆಚ್ಚಿಸುತ್ತವೆ. ಇದರಿಂದ ಬೌದ್ಧಿಕ ಮಟ್ಟ ಸುಧಾರಣೆಗೊಳ್ಳುತ್ತದೆ. ವಿಷಯ ಶಿಕ್ಷಕರು ಉತ್ತಮ ಮಾರ್ಗದರ್ಶನ ನೀಡಿ, ಅತ್ಯುತ್ತಮ ಮಾದರಿ ತಯಾರಿಸಿರುವುದು ಶ್ಲಾಘನೀಯ ಎಂದರು. ಪ್ರಾಚಾರ್ಯ ಬಸವರಾಜ ಬಿರಾದಾರ್, ಮುಖ್ಯಶಿಕ್ಷಕ ಪಾಂಡುರಂಗ, ಶಿಕ್ಷಕರಾದ ರಾಮಣ್ಣ, ಧರ್ಮಾಯತ್, ಶ್ರೀನಿವಾಸ, ದೈಹಿಕ ಶಿಕ್ಷಕ ಪಂಪನಗೌಡ, ಅಮರೇಶ ಇತರರು ಇದ್ದರು.