ಸಿಂಧನೂರಿಗೆ ಇಂದು ಸಿಎಂ ಎಚ್‌ಡಿಕೆ ಆಗಮನ

ಸಿಂಧನೂರು (ರಾಯಚೂರು): ನಗರಕ್ಕೆ ಜ.5ರಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಲಿದ್ದು, ಒಟ್ಟು 260 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಲಿದ್ದಾರೆ.

ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಇಂಧನ ಇಲಾಖೆಯ 3, ಜಲಸಂಪನ್ಮೂಲ ಇಲಾಖೆ 2, ಎಚ್‌ಕೆಆರ್‌ಡಿಬಿಯ 20, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ 9, ಸಣ್ಣ ನೀರಾವರಿ ಇಲಾಖೆ 6, ಲೋಕೋಪಯೋಗಿ ಇಲಾಖೆ 6, ಪೌರಾಡಳಿತ ಇಲಾಖೆ 62, ಪ್ರವಾಸೋದ್ಯಮ ಇಲಾಖೆ 3, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ 1, ಉನ್ನತ ಶಿಕ್ಷಣ ಇಲಾಖೆ 2 ಸೇರಿ 252 ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದೇ ವೇಲೆ ವಿವಿಧ ಇಲಾಖೆಗಳ 24 ಕಾಮಗಾರಿಗಳ ಉದ್ಘಾಟನೆ ನೆರವೇರಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ ನಾಡಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ, ಸಚಿವರಾದ ಜಿ.ಟಿ.ದೇವೇಗೌಡ, ಬಂಡೆಪ್ಪ ಖಾಶೆಂಪುರ, ಸತೀಶ ಜಾರಕಿಹೊಳಿ, ಕೃಷ್ಣ ಭೈರೇಗೌಡ, ಯು.ಟಿ.ಖಾದರ್, ಸಾರಾ ಮಹೇಶ, ಸಿ.ಎಸ್.ಪುಟ್ಟರಾಜು, ರಾಜಶೇಖರ ಪಾಟೀಲ್, ಕೊಪ್ಪಳ ಸಂಸದ ಸಂಗಣ್ಣ ಕರಡಿ, ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿಪಾಲ್ಗೊಳ್ಳಲಿದ್ದಾರೆ.

ವೇದಿಕೆ ಸಜ್ಜು: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. 25 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ. ವಿಐಪಿ ಗ್ಯಾಲರಿ ಕೂಡ ಸಿದ್ಧಗೊಳಿಸಲಾಗಿದೆ. ಹೆಲಿಪ್ಯಾಡ್‌ನಲ್ಲಿ ವಿವಿಧ ಸಂಘಟನೆಗಳ ಮನವಿ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಬಿಗಿ ಬಂದೋಬಸ್ತ್‌ಗಾಗಿ 600 ಪೊಲೀಸರನ್ನು ನಿಯೋಜಿಸಲಾಗಿದೆ. ಸಿಪಿಐ ಹಾಗೂ ಪಿಎಸ್‌ಐ ಸೇರಿ 50, ಡಿವೈಎಸ್‌ಪಿ-4 ಹಾಗೂ 130 ಹೋಮ್‌ಗಾರ್ಡ್ಸ್ ಅನ್ನು ನಿಯೋಜಿಸಲಾಗಿದೆ.