ಸಿಂಧನೂರು: ನಗರದ ಪಿಡಬ್ಲ್ಯುಡಿ ಕ್ಯಾಂಪ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ಸ್ಥಳಕ್ಕೆ ಮಾಜಿ ಸಚಿವ ವೆಂಕಟರಾವ ನಾಡಗೌಡ, ಜೆಡಿಎಸ್ ಪಕ್ಷದ ಮುಖಂಡರೊಂದಿಗೆ ಇತ್ತೀಚೆಗೆ ಭೇಟಿ ನೀಡಿ, ಪರಿಶೀಲಿಸಿ, ವೈದ್ಯರೊಂದಿಗೆ ಚರ್ಚಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಸಚಿವನಾಗಿದ್ದಾಗ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿಂಧನೂರಿಗೆ ಮಂಜೂರು ಮಾಡುವಂತೆ ಒತ್ತಡ ಹಾಕಿದ್ದರ ಪ್ರತಿಫಲ ಇದಾಗಿದೆ. ಮೊದಲಿಗೆ ಮುಳ್ಳೂರು ಬಳಿ ಆಸ್ಪತ್ರೆ ನಿರ್ಮಾಣಕ್ಕೆ ಭೂಮಿ ಪೂಜೆ ಸಲ್ಲಿಸಲಾಗಿತ್ತು.
ಆದರೆ, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ನೀರಾವರಿ ಇಲಾಖೆಗೆ ಸಂಬಂಧಿಸಿದ 2 ಎಕರೆ ಜಾಗದಲ್ಲಿ 12 ಕೋಟಿ ರೂ. ಅನುದಾನದಲ್ಲಿ ಆಸ್ಪತ್ರೆಯ ನೂತನ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು ಎಂದರು.
ಎರಡು ಆಪರೇಷನ್ ಥಿಯೇಟರ್, ಮಕ್ಕಳ ಆರೈಕೆ ಕೇಂದ್ರ, ಡ್ಯೂಟಿ ಮತ್ತು ವಿಸಿಟಿಂಗ್ ಡಾಕ್ಟರ್‌ಗಳಿಗೆ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣವಾಗಿದ್ದು, ಚಿಕಿತ್ಸೆಗೆ ಸಂಬಂಧಿಸಿದ ಎಲ್ಲ ಸಲಕರಣೆಗಳು ಸರ್ಕಾರದಿಂದ ಬರಲಿವೆ ಎಂದು ವೈದ್ಯರು ತಿಳಿಸಿದ್ದಾರೆ.
ಈ ಆಸ್ಪತ್ರೆಯಲ್ಲಿ ಮೂವರು ಡೈನೋಕಾಲಜಿಸ್ಟ್‌ಗಳು, ಇಬ್ಬರು ಮಕ್ಕಳ ತಜ್ಞರು ಹಾಗೂ ಇಬ್ಬರು ಅರಿವಳಿಕೆ ತಜ್ಞರು ಸೇರಿ ಒಟ್ಟು ಏಳು ಜನ ವೈದ್ಯರು ಇರುತ್ತಾರೆ. ತಾಯಿ ಮತ್ತು ಮಕ್ಕಳಿಗೆ ಒಂದೇ ಕಡೆ ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಲಭಿಸುತ್ತದೆ.
ಆದ್ದರಿಂದ ಕೂಡಲೇ ಶಾಸಕ ಹಂಪನಗೌಡ ಬಾದರ್ಲಿ ಅವರು ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿ ಮೇಲೆ ಒತ್ತಡ ಹಾಕಿ ಬೇಕಾಗಿರುವ ತಜ್ಞ ವೈದ್ಯರನ್ನು ನೇಮಿಸಿ, ಮೂಲ ಸೌಕರ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.
ನಗರಸಭೆೆ ಸದಸ್ಯ ಚಂದ್ರಶೇಖರ ಮೈಲಾರ, ಗುತ್ತಿಗೆದಾರ ಆಬೀದ್ ಖಾದ್ರಿ, ಜೆಡಿಎಸ್ ಪ್ರಮುಖರಾದ ಅಶೋಕಗೌಡ ಗದ್ರಟಗಿ, ನಾಗೇಶ ಹಂಚಿನಾಳ, ವೆಂಕಟೇಶ ನಂಜಲದಿನ್ನಿ, ಅಲ್ಲಮಪ್ರಭು ಪೂಜಾರ್, ಸೈಯದ್ ಸಲ್ಮಾನ್ ಜಾಗೀರದಾರ್, ರವಿಗೌಡ ಪನ್ನೂರು, ಎಸ್.ಪಿ.ಟೈಲರ್, ಸುಮಿತ್ ತಡಕಲ್, ಸೈಯದ್ ಆಸೀಫ್, ಬುಡ್ಡಾಸಾಬ, ಮೋಸಿನ್ ಇದ್ದರು.