ಸಿಂಧನೂರಿನಲ್ಲಿ ಎಡದಂಡೆ ಕಾಲುವೆ ರೈತರ ಪ್ರತಿಭಟನಾ ಸಮಾವೇಶ

ಸಿಂಧನೂರು: ಎಡದಂಡೆ ನಾಲೆಗೆ ನೀರು ಕೊರತೆಯಾಗಲು ಬೇಜವಾಬ್ದಾರಿಯೇ ಮುಖ್ಯ ಕಾರಣವಾಗಿದೆ. ಈ ಸ್ಥಿತಿ ಕಾವೇರಿ ಭಾಗದಲ್ಲಿ ಆಗಿದ್ದರೆ ರೈತರು ರಕ್ತವೇ ಹರಿಸುತ್ತಿದ್ದರೆಂದು ಸಂತೆಕೆಲ್ಲೂರು ಗುರುಬಸವ ಸ್ವಾಮೀಜಿ ಹೇಳಿದರು.

ನಗರದ ಸ್ತ್ರೀಶಕ್ತಿ ಭವನದಲ್ಲಿ ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಎಡದಂಡೆ ಕಾಲುವೆ ಅಚ್ಚುಕಟ್ಟು ವ್ಯಾಪ್ತಿಯ ನೀರು ಬಳಕೆದಾರರ ಸಹಕಾರ ಸಂಘಗಳ ಒಕ್ಕೂಟ, ಕರ್ನಾಟಕ ರೈತ ಸಂಘ ಸೇರಿದಂತೆ ಇತರೆ ಸಂಘಟನೆಗಳ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಎಡದಂಡೆ ಕಾಲುವೆ ರೈತರ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಿವೃತ್ತ ಇಂಜಿನಿಯರ್ ವಿ.ಪಿ.ಉದ್ದಿಹಾಳ ಮಾತನಾಡಿ, ತುಂಗಭದ್ರಾ ಉಳಿಸಲು ನಾವೇನು ಮಾಡಬೇಕೆಂಬ ಚಿಂತನೆ ನಡೆಯಬೇಕಿದೆ. ಹೂಳು ತೆಗೆಯುವುದು ನಿಲ್ಲಬಾರದು. ಆ ಹೂಳನ್ನು ರೈತರಿಗೆ, ಇಟ್ಟಿಗೆ ಮಾಡುವವರಿಗೆ ಕೊಟ್ಟರೆ ಅನುಕೂಲವಾಗುತ್ತದೆ. ಈಗ ತುಂಗಭದ್ರಾ ಎಡದಂಡೆ ನಾಲೆಗೆ ಆಗುತ್ತಿರುವ ಅನ್ಯಾಯದ ಬಗ್ಗೆ ನಾವೆಲ್ಲ ಧ್ವನಿಯೆತ್ತಬೇಕಿದೆ ಎಂದರು.

ತುಂಗಭದ್ರಾ ಉಳಿಸಿ ಆಂದೋಲನಾ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್.ಪೂಜಾರ್, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಕಾಡಾ ಮಾಜಿ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ರೈತ ಮುಖಂಡ ಹನುಮನಗೌಡ ಬೆಳಗುರ್ಕಿ ಮಾತನಾಡಿದರು.