ಸಿಂಧನೂರು: ಪೊಲೀಸರ ಕಿರುಕುಳ ತಪ್ಪಿಸುವಂತೆ ಒತ್ತಾಯಿಸಿ ಬೀದಿ ಬದಿ ವ್ಯಾಪಾರಸ್ಥರ ಹೋರಾಟ ಸಮಿತಿ ಮುಖಂಡರಿಂದ ಬುಧವಾರ ಸಂಚಾರ ಠಾಣೆ ಪಿಎಸ್‌ಐ ಗಿಡ್ಡಯ್ಯಗೆ ಮನವಿ ಸಲ್ಲಿಸಲಾಯಿತು.
ನಗರದ ಗಂಗಾವತಿ, ಕುಷ್ಟಗಿ, ರಾಯಚೂರು, ಮಸ್ಕಿ, ಹಳೇಬಜಾರ್, ಸುಕಾಲಪೇಟೆ ಮುಖ್ಯರಸ್ತೆಗಳ ಅಕ್ಕಪಕ್ಕದಲ್ಲಿ ಹಲವು ದಶಕಗಳಿಂದ ಶೆಡ್ ಹಾಗೂ ಡಬ್ಬಾ ಅಂಗಡಿಗಳನ್ನು ಇಟ್ಟುಕೊಂಡು ವಿವಿಧ ಸಣ್ಣಪುಟ್ಟ ವ್ಯಾಪಾರಗಳನ್ನು ಮಾಡಿ ಬೀದಿ ಬದಿ ವ್ಯಾಪಾರಸ್ಥರು ಜೀವನ ನಡೆಸುತ್ತಿದ್ದರು. ಆದರೆ ತಾಲೂಕು ಆಡಳಿತ ಮತ್ತು ನಗರಸಭೆ ನ್ಯಾಯಾಲಯದ ಆದೇಶ ನೆಪವೊಡ್ಡಿ ಎಲ್ಲ ಅಂಗಡಿಗಳನ್ನು ಏಕಾಏಕಿ ತೆರವುಗೊಳಿಸಿರುವುದರಿಂದ 2,500ಕ್ಕೂ ಅಧಿಕ ಕುಟುಂಬಗಳ ಬದುಕು ಅತಂತ್ರ ಸ್ಥಿತಿಗೆ ಸಿಲುಕಿದೆ. ಒಂದೂವರೆ ತಿಂಗಳಿನಿಂದ ದುಡಿಮೆ ಇಲ್ಲದೆ ಕುಟುಂಬ ನಿರ್ವಹಣೆ ಹಾಗೂ ಮಕ್ಕಳ ವಿದ್ಯಾಭ್ಯಾಸಕ್ಕೂ ತೊಂದರೆಯಾಗಿದೆ ಎಂದರು.
ವ್ಯಾಪಾರಕ್ಕಾಗಿ ಪಡೆದ ಸಾಲವನ್ನು ಪಾವತಿಸುವಂತೆ ಮೈಕ್ರೋ ಫೈನಾನ್ಸ್‌ಗಳು ಕಿರುಕುಳ ನೀಡುತ್ತಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳ ಡಿವೈಡರ್‌ನಿಂದ 15 ಮೀಟರ್ ನಂತರ ತಳ್ಳುವ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವ ಹಕ್ಕನ್ನು ಸರ್ವೋಚ್ಛ ನ್ಯಾಯಾಲಯ ನೀಡಿದೆ. ಜತೆಗೆ ಪೊಲೀಸ್ ಆಯುಕ್ತರು ನ್ಯಾಯಾಲಯದ ಆದೇಶ ಪಾಲಿಸುವಂತೆ ನಿರ್ದೇಶನ ನೀಡಿದ್ದಾರೆ. ಸಿಂಧನೂರಿನಲ್ಲಿ ರಸ್ತೆಗಳ ಬದಿಗಳಲ್ಲಿ ತಳ್ಳುವ ಬಂಡಿಗಳನ್ನು ಇಟ್ಟುಕೊಂಡು ವ್ಯಾಪಾರ ಮಾಡುವವರಿಗೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ತಕ್ಕಡಿಗಳನ್ನು ತೆಗೆದುಕೊಂಡು ಹೋಗಿ ದಂಡ ಹಾಕುತ್ತಿದ್ದಾರೆ. ಇದುವರೆಗೆ ತಾಲೂಕು ಆಡಳಿತ, ನಗರಸಭೆ ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ ಎಂದು ದೂರಿದರು.