ಕೊನೆಗೂ ವೇದಿಕೆ ಹಂಚಿಕೊಂಡ ಕೈ-ತೆನೆ ಮುಖಂಡರು

ಸಿಂಧನೂರು: ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಮೈತ್ರಿ ಧರ್ಮ ಪಾಲನೆ ಅಷ್ಟಕಷ್ಟೆ ಎಂಬ ಮಾತುಗಳಿದ್ದವು. ಜವಳಗೇರಾ ಜಿಪಂ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಪರ ಕೈಗೊಂಡ ಪ್ರಚಾರ ಕಾರ್ಯಕ್ರಮದಲ್ಲಿ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮುನಿಸು ಮರೆತು ವೇದಿಕೆ ಹಂಚಿಕೊಂಡು ಒಗ್ಗಟ್ಟಿನ ಮಂತ್ರ ಜಪಿಸಿದ್ದಾರೆ !

ಕ್ಷೇತ್ರದಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬದ್ಧ ವೈರಿಗಳಂತೆ ಕೈ-ತೆನೆ ಮುಖಂಡರು ರಾಜಕೀಯ ಮಾಡಿದ್ದರು. ಮೈತ್ರಿ ಅಭ್ಯರ್ಥಿಯಾಗಿ ರಾಜಶೇಖರ ಹಿಟ್ನಾಳ ಘೋಷಣೆ ನಂತರವೂ ಕ್ಷೇತ್ರದಲ್ಲಿ ನಾನೊಂದು ತೀರ, ನೀನೊಂದು ತೀರ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೈಕಮಾಂಡ್ ನಿರ್ಧಾರದಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಪ್ರಚಾರ, ಸಭೆ ಹಾಗೂ ಇತರ ಕಾರ್ಯದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂಬ ಸೂಚನೆ ಉಭಯ ಪಕ್ಷಗಳ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು. ನಂತರದಲ್ಲಾದ ರಾಜಕೀಯ ಬೆಳವಣಿಗೆಯಿಂದ ಹೇಗಪ್ಪ ಹೊಂದಾಣಿಕೆ ಮಾಡಿಕೊಳ್ಳೊದು ಎಂಬ ಚಿಂತೆಯಲ್ಲಿದ್ದರು.

ರಾಜ್ಯದಲ್ಲಿ ದೋಸ್ತಿ ಇದ್ದರೂ ಸಿಂಧನೂರು ವಿಧಾನಸಭೆ ಕ್ಷೇತ್ರದಲ್ಲಿ ಕುಸ್ತಿ ನಡೆದಿತ್ತು. ಸಚಿವ ವೆಂಕಟರಾವ್ ತುಂಗಭದ್ರಾ ಎಡದಂಡೆ ನಾಲೆಗೆ ಎರಡನೇ ಬೆಳೆಗೆ ನೀರು ಕೊಟ್ಟಿಲ್ಲ ಎಂಬ ಅಸ್ತ್ರವನ್ನು ದಾಳವಾಗಿ ಬಳಸಿಕೊಂಡು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ವಿರೂಪಾಕ್ಷಪ್ಪ ಸಮಯ ಸಿಕ್ಕಾಗೊಮ್ಮೆ ಕಾಲೆಳೆಯುತ್ತಿದ್ದರು. ಇದರಿಂದ ಕ್ಷೇತ್ರದಲ್ಲಿ ಮೈತ್ರಿಗೆ ಸ್ವಲ್ಪ ಭಂಗ ಉಂಟಾಗಿತ್ತು.

ಮುಖಂಡರು ಮೇಲ್ನೊಟಕ್ಕೆ ಮೈತ್ರಿಯಾಗಿ ಗುರುತಿಸಿಕೊಂಡಿದ್ದರೂ ಕಾರ್ಯಕರ್ತರಲ್ಲಿನ ಅಸಮಾಧಾನ ದೂರವಾಗಿಲ್ಲ. ಈಗಾಗಲೇ ಕಾಂಗ್ರೆಸ್ ನೇತೃತ್ವದಲ್ಲಿ ಕೈಗೊಂಡ ಜಿಪಂ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಭಾಗವಹಿಸಿದ್ದು, ಜೆಡಿಎಸ್‌ನ ಬೆರಳೆಣಿಕೆ ಮುಖಂಡರು ಭಾಗವಹಿಸಿದ್ದರು. ರೌಡಕುಂದದಲ್ಲಿ ನಡೆದ ಜೆಡಿಎಸ್ ನೇತೃತ್ವದ ಪ್ರಚಾರ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಹೊರತುಪಡಿಸಿ ಕಾಂಗ್ರೆಸ್ ಜಿಪಂ ಸದಸ್ಯರು ಸೇರಿ ಇತರರು ಗೈರಾಗಿದ್ದರು.

ಕೊನೆಗೂ ಎಚ್ಚೆತ್ತ ಕೊಪ್ಪಳ ಲೋಕಸಭೆ ಮೈತ್ರಿ ಅಭ್ಯರ್ಥಿ ರಾಜಶೇಖರ ಹಿಟ್ನಾಳ ತಂದೆ ಹಾಗೂ ಮಾಜಿ ಶಾಸಕ ಬಸವರಾಜ ಹಿಟ್ನಾಳ ಜವಳಗೇರಾ ಜಿಪಂ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಚಿವ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪರನ್ನು ಒಂದೇ ವೇದಿಕೆಗೆ ಕರೆ ತಂದು ಒಗ್ಗಟ್ಟಿನ ಮಂತ್ರ ಪಠಿಸಿದ್ದಾರೆ. ಇದು ಮೈತ್ರಿ ಅಭ್ಯರ್ಥಿಗೆ ಫಲ ನೀಡುವುದೆ ಎಂಬುದು ಕಾದು ನೋಡಬೇಕಿದೆ.

ಗುರಿ ಮಾಡದಿರಿ
ಜವಳಗೇರಾ ಜನರು ಮೈತ್ರಿ ಅಭ್ಯರ್ಥಿಗೆ ಬೆಂಬಲಿಸಬೇಕು. ವೇದಿಕೆ ಮೇಲೆ ಕುಳಿತ ಮೂವರನ್ನು ಗುರಿ ಮಾಡಬೇಡಿ, ಮೈತ್ರಿ ಅಭ್ಯರ್ಥಿ ಗೆಲ್ಲಿಸುವ ಮೂಲಕ ನಮಗೆ ಗೌರವ ತನ್ನಿ ಎಂದು ಪ್ರಚಾರ ಸಭೆಯಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಹೇಳಿದ್ದಾರೆ.

ಜೈ ಜೈ ಕಾಂಗ್ರೆಸ್
ಜವಳಗೇರಾದ ಪ್ರಚಾರ ಸಭೆಯಲ್ಲಿ ಮಾತು ಮುಗಿಸುವ ಮುನ್ನ ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಜೈ ಜೈ ಕಾಂಗ್ರೆಸ್ ಎಂದು ಜಯಕಾರ ಹಾಕಿದ್ದನ್ನು ಮನಗಂಡ ಸಚಿವ ವೆಂಕಟ ರಾವ್ ನಾಡಗೌಡ ಜೆಡಿಎಸ್‌ಗೂ ಜೈ ಜೈ ಎಂದೇಳಿ ಎಂದು ಕಾಲೆಳೆದರು. ಇದು ಕಾರ್ಯಕರ್ತರನ್ನು ಹಾಸ್ಯದಲ್ಲಿ ತೇಲಿಸಿತು.

Leave a Reply

Your email address will not be published. Required fields are marked *