
ಸಿಂಧನೂರು: ದೇಶದಲ್ಲಿ 15 ವರ್ಷಗಳ ಹಿಂದೆ ಹಲವು ಭರವಸೆ ನೀಡಿ ಅಧಿಕಾರಕ್ಕೆ ಬಂದ ಬಿಜೆಪಿ ಜನಪರ ಆಡಳಿತ ನೀಡುವಲ್ಲಿ ವಿಫಲವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ನಗರದ ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ನಗರ ಹಾಗೂ ಗ್ರಾಮೀಣ ಬ್ಲಾಕ್ ಕಾಂಗ್ರೆಸ್‌ನಿಂದ ಸೋಮವಾರ ಆಯೋಜಿಸಿದ್ದ ಸಮರ್ಪಣೆ ಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ ಹಾಗೂ ಗ್ರಾಮೀಣ ಘಟಕದ ನೂತನ ಅಧ್ಯಕ್ಷ ಲಿಂಗಪ್ಪ ದಢೇಸುಗೂರು ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು. ದೇಶದಲ್ಲಿ ಬಿಜೆಪಿಯಿಂದ ಏಕಪಾತ್ರಾಭಿನಯ ನಡೆದಿದೆ. ಪಹಲ್ಗಾಮ್ ಘಟನೆ ಬಳಿಕ ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ಹೋದಾಗ ಭಾರಿ ಜನಬೆಂಬಲ ವ್ಯಕ್ತವಾಗಿತ್ತು. ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಕ್ಕೆ ಪಡೆಯಲು ಮುಂದಾಗಬೇಕಿತ್ತು. ಯಾವುದೂ ಮಾಡದೆ ಯುದ್ಧ ಕೈಬಿಡಲಾಯಿತು ಎಂದರು.
ಗ್ರಾಮೀಣ ಘಟಕದ ತಾಲೂಕು ಅಧ್ಯಕ್ಷ ಲಿಂಗಪ್ಪ ದಢೇಸುಗೂರು ಮಾತನಾಡಿ, ಕಾಂಗ್ರೆಸ್ ಜವಾಬ್ದಾರಿಯುತ ಸ್ಥಾನ ನೀಡಿದ್ದು, ಪಕ್ಷ ಸಂಘಟನೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.
ಪ್ರಮುಖರಾದ ಲಿಂಗರಾಜ ಪಾಟೀಲ್, ಜಾಫರ್ ಜಾಗೀರದಾರ, ಆರ್. ತಿಮ್ಮಯ್ಯನಾಯಕ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಮಂಜುಳಾ ಪ್ರಭುರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ವೀರೇಶ ಹಟ್ಟಿ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿ ಮಲಿಕ್, ಪ್ರಮುಖರಾದ ಶ್ರೇಣಿಕರಾಜ ಸೇಠ್, ಎಂ.ರಂಗನಗೌಡ, ಸಿದ್ದರಾಮಪ್ಪ ಮಾಡಸಿರವಾರ, ಸತ್ಯನಗೌಡ ಒಳಬಳ್ಳಾರಿ, ಸುಬ್ಬಾರಾವ್, ಮರಿಯಪ್ಪ ಜಾಲಿಹಾಳ, ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ.ಅನಿಲ್‌ಕುಮಾರ, ಶ್ರೀದೇವಿ ಶ್ರೀನಿವಾಸ, ದಾಕ್ಷಾಯಿಣಿ ಮಾಲಿಪಾಟೀಲ್, ಬಸಮ್ಮ ಇದ್ದರು.