ಸಿಂಧನೂರು: ದೇಶದಲ್ಲಿ ಅಸಮಾನತೆ ತೊಲಗಿದರೆ ಮಾತ್ರ ಆರೋಗ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಮಾನವ ಹಕ್ಕುಗಳ ಹೋರಾಟಗಾರ, ಮುಂಬೈನ ಐಐಎಂ ವಿಶ್ರಾಂತ ಪ್ರಾಧ್ಯಾಪಕ ಡಾ.ರಾಮ್ ಪುನಿಯಾನಿ ಹೇಳಿದರು.

ನಗರದ ಸತ್ಯಗಾರ್ಡನ್‌ನಲ್ಲಿ ಶನಿವಾರ ನಿರ್ಮಿಸಿದ್ದ ಮೆದಿಕಿನಾಳ ಭೂ ಹೋರಾಟ ವೇದಿಕೆಯಲ್ಲಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಹಾಗೂ ಮೇ ಸಾಹಿತ್ಯ ಮೇಳ ಬಳಗ ಸಿಂಧನೂರು ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ‘ಅಸಮಾನ ಭಾರತ ಸಮಾನತೆಗಾಗಿ ಸಂಘರ್ಷ ಅಂದು-ಇಂದು’ ಎಂಬ ಘೋಷವಾಕ್ಯದ 11ನೇ ಮೇ ಸಾಹಿತ್ಯ ಮೇಳದಲ್ಲಿ ಅವರು ಮಾತನಾಡಿದರು.
ಜಾತಿ, ಧರ್ಮ, ವರ್ಗ, ಲಿಂಗ ಅಸಮಾನತೆಗಳು ವ್ಯಾಪಕವಾಗಿವೆ. ಸ್ವಾತಂತ್ರೊೃೀತ್ತರ ಭಾರತದಲ್ಲಿ ಸಂವಿಧಾನದ ಆಶಯದಂತೆ ಅಸಮಾನತೆ ಬೇರು ಸಮೇತ ತೊಲಗಬೇಕಾಗಿತ್ತು. ಆದರೆ, ಸಂವಿಧಾನ ಅಸ್ತಿತ್ವಕ್ಕೆ ಬರುವ ಸಮಯದಲ್ಲಿ ವಿರೋಧಿಸಿದ ಮನುಸ್ಮತಿಯ ಆರಾಧಕರು ಈಗಲೂ ಅಸಮಾನತೆಯನ್ನು ಪೋಷಿಸುತ್ತಿದ್ದಾರೆ.
ಆಹಾರ ಧಾನ್ಯ ಬೆಳೆಯುವ ರೈತರು ಅನ್ನಕ್ಕಾಗಿ, ಮನೆ ಕಟ್ಟುವ ಕಾರ್ಮಿಕರು ವಾಸಕ್ಕಾಗಿ, ನೇಕಾರರು ಬಟ್ಟೆಗಾಗಿ ಪರಿತಪಿಸುತ್ತಿದ್ದಾರೆ. ಶ್ರೀಮಂತರು ಶ್ರೀಮಂತರಾಗಿ, ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಇದರಿಂದ ಅಂತರ ಹೆಚ್ಚುತ್ತಿದ್ದು, ದೇಶದಲ್ಲಿ ಶೇ.1ರಷ್ಟು ಜನರಲ್ಲಿ ಸಂಪತ್ತು ಮಿತಿಮೀರಿ ಸಂಗ್ರಹವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮೆದಿಕಿನಾಳ ಭೂ ಹೋರಾಟಗಾರ್ತಿ ಸಂಗಮ್ಮ ಅವರು, 1986-87 ರಲ್ಲಿ ನಡೆದ ಮೆದಿಕಿನಾಳ ಭೂ ಹೋರಾಟವನ್ನು ಸ್ಮರಿಸಿದರು. ನವದೆಹಲಿ ವಿವಿ ನಿವೃತ್ತ ಪ್ರಾಧ್ಯಾಪಕ ಶಂಶುಲ್ ಇಸ್ಲಾಂ, ಹಿರಿಯ ಪತ್ರಕರ್ತ ಸಂಗಮೇಶ ಮೆಣಸಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬೆಂಗಳೂರಿನ ಎ.ನಾರಾಯಣ, ವಿನೋದ ಪೌಲ್, ದಲಿತ ಚಳವಳಿಯ ಭೀಮಣ್ಣ ನಗನೂರು, ಕಾರ್ಮಿಕ ಚಳವಳಿಯ ನರಸಿಂಹಪ್ಪ, ಮದ್ಯ ವಿರೋಧಿ ಹೋರಾಟಗಾರ್ತಿ ಚಿನ್ನಮ್ಮ ಮುದ್ದನಗುಡ್ಡಿ, ರೈತ ಚಳವಳಿಗಾರ ತಿಮ್ಮನಗೌಡ ಚಿಲ್ಕರಾಗಿ, ಕನ್ನಡ ವಿವಿ ಪ್ರಾಧ್ಯಾಪಕ ಬಿ.ಎಂ.ಪುಟ್ಟಯ್ಯ, ಎಸ್.ಜೆ.ಹುಸೇನಸಾಬ್, ಮೋಕ್ಷಮ್ಮ, ಹೇಮಂತ ಎಂ.ಭೂತನಾಳ, ಅನಿಲ್ ಹೊಸಮನಿ ಇತರರಿದ್ದರು. ಡಿ.ಎಚ್.ಕಂಬಳಿ ಸ್ವಾಗತಿಸಿದರು. ಎಚ್.ಎಸ್. ಅನುಪಮಾ ನಿರೂಪಿಸಿದರು.
ಕೋಟ್: ಶಿಕ್ಷಣ ಖಾಸಗೀಕರಣದಿಂದ ಗುಣಮಟ್ಟದ ಶಿಕ್ಷಣ ತಳ ಸಮುದಾಯದ ಕೈಗೆಟುಕದಂತಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಕುಸಿತದಿಂದ ದಲಿತ-ದಮನಿತ ಸಮುದಾಯಗಳು ಸಂಕಷ್ಟಕ್ಕೆ ಸಿಲುಕಿವೆ.
ಮಾಲತಿ ವರಾಳೆ, ಹೋರಾಟಗಾರ್ತಿ, ಔರಂಗಾಬಾದ್
ಪುಸ್ತಕ ಮಳಿಗೆ ಆಕರ್ಷಣೆ: ಮೇ ಸಾಹಿತ್ಯ ಮೇಳ ಅಂಗವಾಗಿ ಹಾಕಲಾಗಿದ್ದ ಪುಸ್ತಕ ಮಳಿಗೆಗಳು ಆಕರ್ಷಿಸಿದವು. ಅಸಮಾನ ಭಾರತ ಕುರಿತು ಸೇರಿ ಚಳವಳಿಯ ಹಲವು ಬರಹಗಾರರ ಪುಸ್ತಕಗಳನ್ನು ಜನರು ವೀಕ್ಷಿಸಿ, ಖರೀದಿಸಿದರು. ರಾಯಚೂರು, ಮೈಸೂರು, ಗದಗ, ಬಳ್ಳಾರಿ, ವಿಜಯನಗರ, ಕೊಪ್ಪಳ, ಚಿತ್ರದುರ್ಗ, ತುಮಕೂರು, ಧಾರವಾಡ, ಕಲಬುರಗಿ ಸೇರಿ ವಿವಿಧ ಜಿಲ್ಲೆಗಳಿಂದ ಸಾವಿರಾರು ಜನರು ಮೇಳಕ್ಕೆ ಆಗಮಿಸಿದ್ದರು. 11ನೇ ಮೇ ಸಾಹಿತ್ಯ ಮೇಳಕ್ಕೆ ಬಂದ ಜನರಿಗೆ ಹೋಳಿಗೆ, ಜೋಳದ ರೊಟ್ಟಿ, ಚಟ್ನಿ, ಅನ್ನ ಸಾಂಬಾರು ವ್ಯವಸ್ಥೆ ಮಾಡಲಾಗಿತ್ತು.