ಮಠಮಾನ್ಯಗಳ ಸೇವೆ ಅಪಾರ – ಸಚಿವ ಯು.ಟಿ.ಖಾದರ್ ಬಣ್ಣನೆ

ಸಿಂಧನೂರು: ವಿಶ್ವದಲ್ಲಿಯೇ ಭಾರತ ವಿಶಿಷ್ಟ ಮತ್ತು ವಿಭಿನ್ನತೆ ಹೊಂದಿದೆ. ಈ ದೇಶದ ಮಣ್ಣಿನ ಸಂಸ್ಕೃತಿಗೆ ವಿಶೇಷ ಗೌರವವಿದ್ದು, ಅದನ್ನು ಯುವಜನತೆ ಮರೆಯದೆ, ಉಳಿಸಿ ಬೆಳೆಸಿಕೊಂಡು ಹೋಗಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಯು.ಟಿ.ಖಾದರ್ ಹೇಳಿದರು.

ತಾಲೂಕಿನ ಯದ್ದಲದೊಡ್ಡಿ ಗ್ರಾಮದ ಸುವರ್ಣಗಿರಿ ವಿರಕ್ತಮಠದಲ್ಲಿ ಮಂಗಳವಾರ ಸಂಜೆ ಹಮ್ಮಿಕೊಂಡಿದ್ದ ಮಹಾಲಿಂಗ ಸ್ವಾಮೀಜಿ 50ನೇ ಹುಟ್ಟುಹಬ್ಬ ಹಾಗೂ ಶಿಲಾಮಠ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಮಠಮಾನ್ಯಗಳ ಸೇವೆ ಅಪಾರವಾಗಿದೆ. ಮಹಾಲಿಂಗ ಸ್ವಾಮೀಜಿ ಈ ಭಾಗದಲ್ಲಿಯೂ ಜನರ ಬದುಕು ಉಜ್ವಲಗೊಳಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ. ಮಠಮಾನ್ಯಗಳಿಂದಲೇ ಇಂದು ಶೈಕ್ಷಣಿಕ, ಧಾರ್ಮಿಕ ಕ್ರಾಂತಿ ನಡೆಯುತ್ತಿದೆ. ದಾಸೋಹದ ಪರಿಕಲ್ಪನೆಯೂ ಮಠಗಳಿಂದ ನಮಗೆ ಸಿಕ್ಕಿದೆ ಎಂದರು.

ನೂತನ ಶಿಲಾಮಠ ಉದ್ಘಾಟಿಸಿ ಹಾಲಕೇರೆ, ಬಳ್ಳಾರಿ, ಹೊಸಪೇಟೆ ಹಾಗೂ ಕೊಟ್ಟೂರುಸ್ವಾಮಿ ಸಂಸ್ಥಾನ ಮಠಗಳ ಜಗದ್ಗುರು ಶ್ರೀ ಡಾ.ಸಂಗನಬಸವ ಸ್ವಾಮೀಜಿ ಮಾತನಾಡಿ, ಮಠಗಳಿಂದ ಜನರಲ್ಲಿ ಶಾಂತಿ, ಭಾವೈಕ್ಯ ಮೂಡಿಸುವ ಕೆಲಸವಾಗುತ್ತಿದೆ. ಈ ಪುಣ್ಯ ನೆಲದಲ್ಲಿ ಶ್ರೀ ಚನ್ನಬಸವ ಶಿವಯೋಗಿಗಳು ನಡೆದಾಡಿದ್ದಾರೆ. ಇಂಥ ಪ್ರದೇಶದಲ್ಲಿ ಅತ್ಯುತ್ತಮವಾದ ಶಿಲಾಮಠವನ್ನು ಮಹಾಲಿಂಗ ಸ್ವಾಮೀಜಿ ನಿರ್ಮಾಣ ಮಾಡಿದ್ದಾರೆ. ಎಲ್ಲ ಸ್ವಾಮೀಜಿಗಳನ್ನು ಒಂದೇ ವೇದಿಕೆಯಲ್ಲಿ ಕುಳ್ಳಿರಿಸಿ ಧರ್ಮ ಜಾಗೃತಿಯ ಸಂದೇಶ ನೀಡಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.

ಶ್ರೀ ಮಠದ ಮಹಾಲಿಂಗ ಸ್ವಾಮೀಜಿ, ವಿವಿಧ ಮಠದ ಸ್ವಾಮೀಜಿಗಳು ಹಾಗೂ ಗಣ್ಯರು, ಭಕ್ತರು ಸನ್ಮಾನ ಸ್ವೀಕರಿಸಿ, ನಿಜಕ್ಕೂ ಈ ಸಮಾರಂಭ ನನ್ನ ಜೀವಮಾನದಲ್ಲಿ ಮರೆಯದ ಕ್ಷಣವಾಗಿದೆ. ಅಭೂತಪೂರ್ವ ಸಹಕಾರ ದೊರೆತಿದೆ. ಶ್ರೀ ಮಠದಿಂದ ಸಮಾಜಮುಖಿ ಕಾರ್ಯಗಳು ನಿರಂತರ ಸಾಗಲಿವೆ ಎಂದರು. ಚಿಕಲಪರ್ವಿ ರುದ್ರಮುನೀಶ್ವರ ವಿರಕ್ತಮಠದ ಅಭಿನವ ರುದ್ರಮುನಿ ಸ್ವಾಮೀಜಿ ಮಾತನಾಡಿ, ಶ್ರೀ ಮಠದ ಮಹಾಲಿಂಗ ಸ್ವಾಮೀಜಿ ಅವರಿಗೆ ಈ ಭಾಗದ ಭಕ್ತರು ಆನೆಬಲ ನೀಡಿದ್ದಾರೆ. ಇದೊಂದು ಸುವರ್ಣಕ್ಷರದಲ್ಲಿ ಬರೆದಿರುವ ಕಾರ್ಯಕ್ರಮವಾಗಿದೆ ಎಂದು ಶ್ಲಾಸಿದರು. ಬಳಗಾನೂರು ಮರಿಸಿದ್ಧಬಸವ ಸ್ವಾಮೀಜಿ ಮಾತನಾಡಿದರು.

ಒಳಬಳ್ಳಾರಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಅಡವಿ ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ವಡವಡಗಿ ಮಲ್ಲಿಕಾರ್ಜುನ ಸ್ವಾಮೀಜಿ, ಪ್ರಭುಲೀಲ ಕಂಠಸ್ವಾಮೀಜಿ, ಕನಕಪುರ ಚನ್ನಬಸವ ಸ್ವಾಮೀಜಿ, ಯಡ್ರಾಮಿ ಸಿದ್ಧಲಿಂಗ ಸ್ವಾಮೀಜಿ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ ಇದ್ದರು.