ಕಾರ್ಮಿಕನ ಕುಟುಂಬಕ್ಕೆ ಪರಿಹಾರ ನೀಡಲು ಕರ್ನಾಟಕ ರೈತ ಸಂಘ, ಕ್ರಾಂತಿಕಾರಿ ಯುವಜನ ರಂಗ ಒತ್ತಡ

ಸಿಂಧನೂರು: ಖಾತ್ರಿ ಯೋಜನೆಯಡಿ ಕೆರೆಯ ಮಣ್ಣು ತೆಗೆಯುತ್ತಿದ್ದಾಗ ಮಣ್ಣು ಕುಸಿದು ಸಾವಿಗೀಡಾದ ಕೂಲಿಕಾರ್ಮಿಕ ಶಶಿಧರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಒದಗಿಸುವಂತೆ ಒತ್ತಾಯಿಸಿ ಕರ್ನಾಟಕ ರೈತ ಸಂಘ ಹಾಗೂ ಕ್ರಾಂತಿಕಾರಿ ಯುವಜನ ರಂಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್‌ಗೆ ಶುಕ್ರವಾರ ಮನವಿ ಸಲ್ಲಿಸಿತು.

ಕಾರ್ಮಿಕನ ಸಾವಿಗೆ ಅಧಿಕಾರಿಗಳ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಕಾರಣವಾಗಿದೆ. ಸ್ಥಳೀಯವಾಗಿಯೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಬೇಕೆಂಬ ನಿಯಮವಿದ್ದರೂ, ಗುಂಡಾ ಗ್ರಾಪಂ ವ್ಯಾಪ್ತಿಯ ಗುಡಿಹಾಳ ಗ್ರಾಮದ ಕೆರೆಯ ಮಣ್ಣು ತೆಗೆಯಲು ಕೂಲಿಕಾರರನ್ನು ನಿಯೋಜಿಸುವ ಮೂಲಕ ನಿಯಮ ಉಲ್ಲಂಘಿಸಿದ್ದಾರೆ. ಬರದ ಬೇಗೆಯಿಂದ ಕಂಗಾಲಾಗಿರುವ ಜನರು ಉದ್ಯೋಗಕ್ಕಾಗಿ ಅಲೆದಾಡುತ್ತಿದ್ದು, ಸಕಾಲಕ್ಕೆ ಉದ್ಯೋಗ ದೊರಕಿಸಿ ಕೊಡಬೇಕಾದ ಗ್ರಾಪಂ ಅಧಿಕಾರಿಗಳು ಬೇಜವಾಬ್ದಾರಿ ವಹಿಸಿರುವುದಲ್ಲದೆ, ಅಪಾಯಕಾರಿ ಸ್ಥಳದಲ್ಲಿ ಕೆಲಸ ನಿರ್ವಹಿಸುವಾಗ ಕನಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದಿದ್ದರಿಂದ ಕಾರ್ಮಿಕ ಬಲಿಯಾಗಿದ್ದಾರೆ.

ನರೇಗಾ ಕೆಲಸ ಕೊಡಬೇಕಾದವರು ವೈಜ್ಞಾನಿಕವಾಗಿ ಕ್ರಿಯಾಯೋಜನೆ ರೂಪಿಸದೇ ನಿರ್ಲಕ್ಷ್ಯ ವಹಿಸಿರುವುದು ಮುಗ್ದ ಕೂಲಿಕಾರ್ಮಿಕರ ಸಾವಿಗೆ ಕಾರಣವಾಗುತ್ತಿದೆ. ಜಿಲ್ಲೆಯಲ್ಲಿ ಖಾತ್ರಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ಕೆಆರ್‌ಎಸ್ ತಾಲೂಕು ಅಧ್ಯಕ್ಷ ರಮೇಶ ಪಾಟೀಲ್, ಆರ್‌ವೈಎಫ್ ರಾಜ್ಯ ಸಂಚಾಲಕ ನಾಗರಾಜ ಪೂಜಾರ್, ಟಿಯುಸಿಐ ಉಪಾಧ್ಯಕ್ಷ ಬಿ.ಎನ್.ಯರದಿಹಾಳ, ಬಸವರಾಜ ಬೆಳಗುರ್ಕಿ, ಕಿರಣಕುಮಾರ್ ಇದ್ದರು.

Leave a Reply

Your email address will not be published. Required fields are marked *