ಕಾಂಗ್ರೆಸ್‌ನಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ – ಶಿವರಾಜ ತಂಗಡಗಿ ಹೇಳಿಕೆ

ಸಿಂಧನೂರು: ಕಾಂಗ್ರೆಸ್ ನೇತೃತ್ವದ ಸರ್ಕಾರದಿಂದ ದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ತಾಲೂಕಿನ ತುರ್ವಿಹಾಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ಕಳೆದ ಐದು ವರ್ಷದ ಅವಧಿಯಲ್ಲಿ ಕೇಂದ್ರ ಬಿಜೆಪಿ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ. ನೋಟ್‌ಬ್ಯಾನ್ ಮೂಲಕ ಜನರನ್ನು ಸಂಕಷ್ಟಕ್ಕೀಡು ಮಾಡಿದ್ದಾರೆ. ಸಾಮಾನ್ಯ ಜನರು ಪರದಾಡುವ ಸ್ಥಿತಿ ನಿರ್ಮಾಣ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸವಿರುವ ಪಕ್ಷವಾಗಿದೆ. ದೇಶದ ಸಮಗ್ರ ಚಿಂತನೆ ಜತೆಗೆ ಅಭಿವೃದ್ಧಿಯನ್ನೆ ಮೂಲಮಂತ್ರವಾಗಿಸಿಕೊಂಡಿದೆ. ಈ ಬಾರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಹಿಟ್ನಾಳರನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ಮಾತನಾಡಿ, ಮೈತ್ರಿ ಪಕ್ಷದ ಅಭ್ಯರ್ಥಿ ಪರ ಕಾರ್ಯಕರ್ತರು ಪ್ರಚಾರ ಮಾಡಬೇಕು ಎಂದರು. ಮಾಜಿ ಸಂಸದರಾದ ಕೆ.ವಿರೂಪಾಕ್ಷಪ್ಪ, ಶಿವರಾಮಗೌಡ, ಅಭ್ಯರ್ಥಿ ರಾಜಶೇಖರ ಹಿಟ್ನಾಳ ಮಾತನಾಡಿದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಬಸನಗೌಡ ಬಾದರ್ಲಿ, ಮುಖಂಡರಾದ ಈಶಪ್ಪ ಸಾಹುಕಾರ ಕುರುಕುಂದಿ, ಮಲ್ಲನಗೌಡ ದೇವರಮನಿ, ಎಂ.ಡಿ.ಫಾರೂಕ್‌ಸಾಬ್ ಖಾಜಿ, ನಿಂಗಪ್ಪ ಕಟ್ಟಿಮನಿ, ಗೂಳಪ್ಪ ಕುಂಟೋಜಿ, ದೊಡ್ಡಪ್ಪ ಕಲ್ಗುಡಿ, ಮರಿಯಪ್ಪ ನಾಯಕ, ಶೇಖರಗೌಡ ದೇವರಮನಿ, ವೆಂಕಪ್ಪ ಬಾರಕೇರ್, ಬಸವರಾಜಸ್ವಾಮಿ ಹಸಮಕಲ್, ಅಂದಾನಪ್ಪ ಗುಂಡಳ್ಳಿ, ರವಿ ಪಾಟೀಲ್ ಮಸ್ಕಿ ಇತರರಿದ್ದರು.

ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಇದ್ದ ಸಂದರ್ಭ ಆಗಿರುವ ಅಭಿವೃದ್ಧಿ ಕಾರ್ಯಗಳು ಈ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಆಗಿಲ್ಲ. ಉದ್ಯೋಗ ಸೃಷ್ಟಿ, ಜನರ ಅಕೌಂಟಿಗೆ ಹಣ ಹಾಕುವುದು ಮಾಡಿಲ್ಲ. ಸಮಗ್ರ ಅಭಿವೃದ್ಧಿಗೆ ಜನರು ಕಾಂಗ್ರೆಸ್ ಬೆಂಬಲಿಸಲಿ.
| ಹಂಪನಗೌಡ ಬಾದರ್ಲಿ ಮಾಜಿ ಶಾಸಕ